Monday, April 27, 2020

ಮಂಗನ ಕಾಯಿಲೆ ಮರಣ ಮೃದಂಗ!

ಇಡೀ ಭಾರತ ದೇಶವು ಕೋವಿಡ್- 19 (ಕೊರೋನಾ ವೈರಸ್) ಜೊತೆ ಸೆಣೆಸಾಡುತ್ತಿದೆ. ಆದರೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಕರೋನಾ ವೈರಸ್ ಜೊತೆ ಜೊತೆಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ.ಎಫ್.ಡಿ.) ಎಂಬ ಮತ್ತೊಂದು ಭಯಾನಕ ಕಾಯಿಲೆ ಪೀಡುಸುತ್ತಿದೆ. 

ನಿಜ. ಕಳೆದ 68 ವರ್ಷಗಳ ಹಿಂದೆ ಕಂಡುಬಂದ ಈ ಕಾಯಿಲೆ, ಪ್ರತಿವರ್ಷ ಬೇಸಿಗೆಯ ಸಮಯದಲ್ಲಿ ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳ ಜನತೆಯ ನೆಮ್ಮದಿಯನ್ನು ಕಸಿಯುತ್ತಿದೆ. ಅಲ್ಲದೇ 2012-13 ರಲ್ಲಿ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲೂ ಈ ಕಾಯಿಲೆ ಹರಡಿರುವ ಬಗ್ಗೆ ವರದಿಯಾಗಿದೆ. 


ಏನಿದು ಮಂಗನ ಕಾಯಿಲೆ?: 
ಅದು 1957 ರ ಸಂದರ್ಭ. ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತ ಆಗತಾನೇ ಸ್ವಾತಂತ್ರ‍್ಯ ಪಡೆದು ಕೇವಲ ಹತ್ತು ವರ್ಷಗಳಾಗಿತ್ತು. 1957 ರ ಬೇಸಿಗೆಯ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವ್ಯಾಪ್ತಿಗೆ ಒಳಪಡುವ ಕ್ಯಾಸನೂರು ಎಂಬ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಗಗಳು ಸಾಯತೊಡಗಿದವು. ಅವು ಎಷ್ಟರಮಟ್ಟಿಗೆ ಎಂದರೆ ಜನರು ಕಟ್ಟಿಗೆ, ತರಗಲೆಗಳನ್ನು ತರಲು ಕಾಡಿಗೆ ತೆರಳಲೂ ಹೆದರಿದರು! ಕ್ಯಾಸನೂರು ಕಾಡಿನಲ್ಲಿ ಈ ರೀತಿಯಾಗಿ ಮಂಗಗಳು ಸತ್ತು ಬೀಳುವುದರ ಜೊತೆಗೆ ಇದರಿಂದ ರೋಗವೂ ಹರಡಲು ಶುರುವಾಯಿತು. ಆದ್ದರಿಂದ ಕ್ಯಾಸನೂರು ಭಾಗದ ಜನರು ಇದಕ್ಕೆ 'ಮಂಗನ ಕಾಯಿಲೆ' ಎಂದು ನಾಮಕರಣ ಮಾಡಿದರು.

ಅಲ್ಲದೇ, ಕ್ಯಾಸನೂರು ಕಾಡನ್ನು ಹೊರತುಪಡಿಸಿ ಜಗತ್ತಿನ ಯಾವುದೇ ಭಾಗದಲ್ಲಿ ಇಂತಹ ಕಾಯಿಲೆ ಕಂಡುಬರದೇ ಇದ್ದ ಕಾರಣದಿಂದ ವಿಜ್ಞಾನಿಗಳು ಇದಕ್ಕೆ 'ಕ್ಯಾಸನೂರು ಕಾಡಿನ ಕಾಯಿಲೆ' ಎಂದು ನಾಮಕರಣ ಮಾಡಿದರು.

ಮಂಗನ ಕಾಯಿಲೆ ಕ್ಯಾಸನೂರು ಕಾಡಿನಲ್ಲಿ ಕಂಡುಬಂದ ಎರಡು ದಶಕಗಳ ತನಕ ಶಿಕಾರಿಪುರ, ಹೊಸನಗರ, ಸಾಗರ, ತೀರ್ಥಹಳ್ಳಿ ಹೀಗೆ ಸುಮಾರು 600 ಚ.ಕಿ.ಮೀ. ವ್ಯಾಪ್ತಿಯ ಮಲೆನಾಡಿನ ಕೆಲವೇ ಪ್ರದೇಶಕ್ಕೆ ಸೀಮಿತಗೊಂಡಿತ್ತು. ಆದರೆ ಕ್ರಮೇಣ ನಗರೀಕರಣದ ಪ್ರಭಾವ ಮತ್ತು ಮಾನವನ ಅತಿಯಾದ ಆಸೆಗಳಿಂದಾಗಿ ಅರಣ್ಯ ಪ್ರದೇಶವು ನಾಶವಾಗುತ್ತಾ ಹೋದಂತೆ ರೋಗಪೀಡಿತ ಮಂಗಗಳು ಕೂಡ ಹೊಸ ಹೊಸ ಅರಣ್ಯಗಳನ್ನು ಅರಸುತ್ತಾ ಹೋದವು. ಇದರಿಂದಾಗಿ ಇಂದು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೂ ಈ ಕಾಯಿಲೆ ವ್ಯಾಪಿಸಿದೆ. ಪ್ರತಿವರ್ಷ ಬೇಸಿಗೆಯ ಸಮಯದಲ್ಲಿ ಸರಿಸುಮಾರು 6 ಸಾವಿರ ಚ.ಕಿ.ಮೀ. ವ್ಯಾಪ್ತಿಯ 2 ಸಾವಿರಕ್ಕೂ ಅಧಿಕ ಜನರನ್ನು ಈ ಕಾಯಿಲೆ ಪೀಡಿಸುವ ಜೊತೆಗೆ ನೂರಾರು ಜನರನ್ನು ಬಲಿ ಪಡೆಯುತ್ತಿದೆ. 

ಕ್ಯಾಸನೂರು ಕಾಡಿನ ಕಾಯಿಲೆಗಳಿಗೆ ಕಾರಣವೇನು?: 
ಕ್ಯಾಸನೂರು ಕಾಡಿನ ಕಾಯಿಲೆಗೆ ಫ್ಲಾವಿವಿರಿಡೆ ಎಂಬ ವೈರಸ್ ಸಮೂಹದಿಂದ ಉಂಟಾಗುತ್ತದೆ. ಸೈಬೀರಿಯಾದಿಂದ ವಲಸೆ ಬಂದ ಪಕ್ಷಿಗಳು ಈ ವೈರಸ್‌ಗಳನ್ನು ಇಲ್ಲಿಗೆ ತಂದಿದೆ ಎನ್ನುವುದು ವೈದ್ಯ ವಿಜ್ಞಾನಿಗಳ ಅಭಿಪ್ರಾಯ. ಬಹುತೇಕ ಈ ವೈರಸ್‌ಗಳನ್ನೇ ಹೋಲುವ ವೈರಸ್‌ಗಳು ಭಾರತದ ಇತರೆ ಭಾಗಗಳಲ್ಲೂ ಕಂಡುಬಂದಿದ್ದು, ಕಾಡಿನಲ್ಲಿ ವಾಸಿಸುವ ಇಲಿ, ಅಳಿಲು, ಬಾವಲಿಗಳೇ ಈ ವೈರಸ್‌ಗಳ ಮೂಲ ಆಗರವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಕಾಡಿನಲ್ಲಿ ವಾಸಿಸುವ ಲಂಗೂರ್ ಮತ್ತು ಬಾನೆಟ್ ಜಾತಿಯ ಮಂಗಗಳು ಕ್ಯಾಸನೂರು ಕಾಡಿನ ಕಾಯಿಲೆಯ ಸೋಂಕಿಗೆ ಬಲಿಯಾಗುತ್ತವೆ. ಕ್ಯಾಸನೂರು ಕಾಡಿನ ಕಾಯಿಲೆ ಸೋಂಕಿಗೆ ಬಲಿಯಾದ ಮಂಗಗಳ ಮೈಮೇಲೆ ರಕ್ತವನ್ನು ಹೀರುವ ಉಣ್ಣೆಗಳು ರೋಗಕಾರಕ ವೈರಸ್‌ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗಳಿಗೆ ವರ್ಗಾಯಿಸುತ್ತವೆ. ಈ ರೋಗಗ್ರಸ್ತ ಉಣ್ಣೆಗಳು ಮಾನವರಿಗೆ ಕಚ್ಚುವುದರಿಂದ ಮಾನವರಿಗೆ ಈ ಸೋಂಕು ತಗಲುತ್ತದೆ. 

ವಿಶೇಷವೆಂದರೆ ಏಡ್ಸ್ ಪೀಡಿತ ತಾಯಿಗೆ ಏಡ್ಸ್ ಸೋಂಕಿತ ಮಗು ಜನಿಸುವಂತೆ ಉಣ್ಣೆಗಳು ಇಡುವ ಮೊಟ್ಟೆ ಮತ್ತು ಮರಿಗಳೂ ಸಹ ವೈರಸ್ ಸಂತತಿಯನ್ನು ಮುಂದುವರೆಸುತ್ತದೆ! 

'ಜನವರಿಯಿಂದ ಜೂನ್ ತಿಂಗಳವರೆಗೆ ಉಣ್ಣೆಗಳ ಸಂತತಿ ಹೆಚ್ಚಿಗೆ ಇರುತ್ತದೆ. ಗ್ರಾಮೀಣ ಭಾಗದ ಜನರೂ ಸೌದೆ, ಜಾನುವಾರುಗಳಿಗೆ ಮೇವನ್ನು ಸಂಗ್ರಹಿಸುವ ಸಲುವಾಗಿ ಬೇಸಿಗೆ ಸಮಯದಲ್ಲೇ ಹೆಚ್ಚಾಗಿ ಭೇಟಿ ನೀಡುತ್ತಾರೆ. ಅಲ್ಲದೇ ಹೀಗೆ ಭೇಟಿ ನೀಡುವ ಬಹುತೇಕ ಪುರುಷರೇ ಹೆಚ್ಚಾಗಿ ಕಾಯಿಲೆಗೆ ತುತ್ತಾಗುತ್ತಾರೆ. ಕಾಡಿಗೆ ಹೋದ ಜಾನುವಾರುಗಳ ಮೈಮೇಲೆ ಅಂಟಿಕೊಂಡಿರುವ ಉಣ್ಣೆಗಳಿಂದ ಕಾಡಿಗೆ ತೆರಳದವರಿಗೂ ಕಾಯಿಲೆ ತಗಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಜಾಗೃತಿ ಅತಿ ಮುಖ್ಯ' ಎನ್ನುತ್ತಾರೆ ಹೊನ್ನಾವರದ ಕೆಎಫ್‌ಡಿ ಜಿಲ್ಲಾ ವೈದ್ಯಾಧಿಕಾರಿ ಡಾ. ಸತೀಶ ಶೆಟ್ಟಿ.

ರೋಗದ ಲಕ್ಷಣಗಳು:
ರೋಗಗ್ರಸ್ತ ಉಣ್ಣೆಗಳ ಕಡಿತದಿಂದ ವೈರಸ್‌ಗಳು ಮಾನವನ ದೇಹ ಸೇರಿದ ಒಂದು ವಾರಗಳಲ್ಲಿ ರೋಗದ ಲಕ್ಷಣಗಳು ಕಾಣಲಾರಂಭಿಸುತ್ತದೆ. 
ವಿಪರೀತ ಜ್ವರ
• ಅಸಾಧ್ಯ ಮೈಕೈ ಮತ್ತು ತಲೆನೋವು
• ನರ ದೌರ್ಬಲ್ಯ
• ವಿಪರೀತ ಆಯಾಸ
• ಬಾಯಿ, ವಸಡು, ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವ
• ಮೆದುಳಿನಲ್ಲಿ ಉರಿಯೂತ
• ಮಂಪರು ಕವಿಯುವುದು
• ಪ್ರಜ್ಞೆ ನಾಶವಾಗುವುದು
• ಲಕ್ವಾ ಕಾಡಬಹುದು.
ಹದಿನೈದು ಇಪ್ಪತ್ತು ದಿನಗಳವರೆಗೂ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಶೇ.90 ರಷ್ಟು ರೋಗಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ.

ಮಂಗನ ಕಾಯಿಲೆ ನಿವಾರಣೋಪಾಯಗಳು:
ಮಂಗನ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ರೋಗ ಪತ್ತೆಯಾಗಿ 63 ವರ್ಷಗಳಾದರೂ ಇವರಿಗೆ ಸರಿಯಾದ ಔಷಧಗಳನ್ನು ಕಂಡುಹಿಡಿದಿಲ್ಲ. ಕ್ಯಾಸನೂರು ಕಾಡಿನ ಕಾಯಿಲೆಯಿಂದ ರಕ್ಷಣೆ ನೀಡುವ ಲಸಿಕೆ ಲಭ್ಯವಿದ್ದು, ರೋಗ ಪತ್ತೆಯಾದ ಬಳಿಕ ಲಸಿಕೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ! ರೋಗ ಪ್ರಾರಂಭಗೊಳ್ಳುವ ಮೂರು ತಿಂಗಳ ಮೊದಲು ತಿಂಗಳಿಗೊಂದರಂತೆ ಎರಡು ಲಸಿಕೆ ಪಡೆದಲ್ಲಿ ರಕ್ಷಣೆಯನ್ನು ಪಡೆಯಬಹುದಾಗಿದೆ. 
ಆರು ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ನಿಷಿದ್ಧ. ಒಂದು ಬಾರಿ ತೆಗೆದುಕೊಂಡರೆ ಅವರಲ್ಲಿ ರೋಗ ನಿರೋಧಕಶಕ್ತಿ ವೃದ್ಧಿಸಲು ಕನಿಷ್ಠ 60 ದಿನ ಬೇಕು. ಅಷ್ಟರ ಒಳಗೆ ಸತ್ತ ಮಂಗಗಳ ಮೇಲಿದ್ದ ಉಣ್ಣೆ ಕಚ್ಚಿದರೆ ಚುಚ್ಚುಮದ್ದು ಪಡೆದಿದ್ದರೂ ಕಾಯಿಲೆಗೆ ಒಳಗಾಗುತ್ತಾರೆ.

ಇನ್ನು ಮುಖ್ಯವಾಗಿ ಕಾಯಿಲೆಯ ಲಕ್ಷಣಗಳು ಕಂಡುಬಂದ ಕೂಡಲೇ ಕೃಷಿಕರು ಕಾಡಿಗೆ ತೆರಳಬಾರದು. ಅನಿವಾರ್ಯವಾಗಿ ಹೋಗಲೇ ಬೇಕಾದಲ್ಲಿ ಮೈತುಂಬಾ ಬಟ್ಟೆ ಧರಿಸಿ, ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸುವುದು ಒಳ್ಳೆಯದು. ಕಾಡಿಗೆ ತೆರಳುವಾಗ ಆರೋಗ್ಯ ಇಲಾಖೆ ವಿತರಿಸುವ ಡಿಎಂಪಿ ತೈಲವನ್ನು ಲೇಪಿಸಿಕೊಳ್ಳುವುದಲ್ಲದೇ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಬೇಕು. ಕಾಡಿನಿಂದ ಹಿಂತಿರುಗಿದ ಬಳಿಕ ಬಿಸಿ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಸ್ನಾನ ಮಾಡುವುದು ಒಳ್ಳೆಯದು ಎನ್ನುತ್ತಾರೆ ಕೆಎಫ್‌ಡಿ ಜಿಲ್ಲಾ ವೈದ್ಯಾಧಿಕಾರಿ ಡಾ. ಸತೀಶ ಶೆಟ್ಟಿ. 

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸುವಂತೆ 2020 ರಲ್ಲಿ ಲಸಿಕೆ ಪಡೆದ ವ್ಯಕ್ತಿಗೂ ಸೋಂಕು ತಗುಲಿದೆ. ಅದರರ್ಥ ವೈರಾಣುವಿನ ಶಕ್ತಿ ಲಸಿಕೆಯನ್ನು ಮೀರಿ ಬೆಳೆದಿದೆ. ಆದರೂ ಲಸಿಕೆ ಪಡೆಯುವುದು ಸದ್ಯಕ್ಕಿರುವ ಮಾರ್ಗಗಳಲ್ಲೊಂದು.
(ವಿಕ್ರಮ ಸಂಪಾದಕೀಯ- ವೃಷಾಂಕ ಭಟ್- ಸಂಪುಟ-72, ಸಂಚಿಕೆ-37, ಪು-7)

ಮಾನವನ ಅತಿಯಾದ ಆಸೆಯಿಂದಾಗಿ ನಾಶವಾಗುತ್ತಿರುವ ಅರಣ್ಯವನ್ನು ಸಂರಕ್ಷಿಸಬೇಕಿದೆ. ಮಾನವನ ನಗರೀಕರಣ ಮತ್ತು ಅರಣ್ಯ ನಾಶ ಪ್ರವೃತ್ತಿ ಮುಂದುವರಿದಲ್ಲಿ ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗದಲ್ಲಿ ಮಾತ್ರ ಇದ್ದ ಕಾಯಿಲೆ ನಾಲ್ಕು ಜಿಲ್ಲೆಗೆ ಹಬ್ಬಿದಂತೆ ಕ್ಯಾಸನೂರು ಕಾಡಿನ ಕಾಯಿಲೆ ಮಹಾರಾಷ್ಟ್ರ ಮತ್ತು ಗೋವಾಕ್ಕೂ ವ್ಯಾಪಿಸುವಲ್ಲಿ ಸಂಶಯವಿಲ್ಲ!

ಮಂಗನ ಕಾಯಿಲೆಗೆ ಒಳಪಡುವ ಜಿಲ್ಲೆಗಳು:
1. ಉತ್ತರಕನ್ನಡ
2. ದಕ್ಷಿಣ ಕನ್ನಡ
3. ಶಿವಮೊಗ್ಗ
4. ಚಿಕ್ಕಮಗಳೂರು

ಮಂಗನ ಕಾಯಿಲೆಗೆ ಒಳಪಡುವ ತಾಲೂಕುಗಳು:
(ಉತ್ತರಕನ್ನಡ)
1. ಹೊನ್ನಾವರ
2. ಸಿದ್ದಾಪುರ
3. ಜೋಯಿಡಾ
(ದಕ್ಷಿಣಕನ್ನಡ)
1. ಬೆಳ್ತಂಗಡಿ
2. ಪುತ್ತೂರು
3. ಸುಳ್ಯ
(ಶಿವಮೊಗ್ಗ)
1. ಸಾಗರ
2. ಸೊರಬ
3. ತೀರ್ಥಹಳ್ಳಿ
(ಚಿಕ್ಕಮಗಳೂರು)
1. ಎನ್.ಆರ್. ಪುರ
2. ಕೊಪ್ಪ
3. ಚಿಕ್ಕಮಗಳೂರು 
©®: ಎಂ‌‌.ಎಸ್‌.ಶೋಭಿತ್ ಮೂಡ್ಕಣಿ
(ಮೇ‌.3, 2020 ರ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದೆ.) 

For Get PDF File click here...

No comments:

Post a Comment