ಲೇಖಕರು: ಡಾ.ಶ್ರೀಧರ ಉಪ್ಪಿನಗಣಪತಿ
ಪ್ರಕಾಶಕರು: ಅದಿತಿ ಪ್ರಕಾಶನ
ಬೆಲೆ: 280 | ಪ್ರಥಮ ಮುದ್ರಣ: 2017
ಲೇಖಕರ ಸಂಪರ್ಕ: +91 83107 64316
ಕರ್ನಾಟಕವು 302 ಕಿ.ಮೀ. ಉದ್ದದ ಕಡಲ ತೀರ ಪ್ರದೇಶ ಹೊಂದಿದ್ದು, ಉತ್ತರಕನ್ನಡದ ಪೂಜಾರಿ ಗ್ರಾಮದಿಂದ ದಕ್ಷಿಣಕನ್ನಡದ ಪ್ರಸಿದ್ಧ ಉಳ್ಳಾಲದ ತನಕ ತನ್ನ ಸೀಮೆಯನ್ನು ವ್ಯಾಪಿಸಿದೆ. ಈ ಸೀಮೆಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಮಹಿಳೆಯರು ಅಥವಾ ಪುರುಷರು ಮೀನು ಬುಟ್ಟಿಯನ್ನು ಹೊತ್ತು "ಹೋಯ್.... ಬಂಗಡೆ, ತೂರಿ, ಇಸ್ವಾಣ.." ಹೀಗೆ ವಿವಿಧ ಜಾತಿಯ ಮೀನುಗಳ ಹೆಸರನ್ನು ಕೂಗುತ್ತಾ, ಮನೆಮನೆಗೆ ತೆರಳಿ ಮಾರಾಟ ಮಾಡುವ ಅಥವಾ ಪಟ್ಟಣ ಭಾಗದಲ್ಲಿ ನಿರ್ದಿಷ್ಟಪಡಿಸಿದ ಮೀನು ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುವವರನ್ನು ನಾವು ಕಾಣಬಹುದು.
ಹೀಗೆ ಕಡಲನ್ನೇ ನಂಬಿ ಸಮುದ್ರದೊಂದಿಗೆ ತಮ್ಮ ಬದುಕನ್ನು ಸಾಗಿಸುತ್ತಿರುವ ಸಮುದಾಯವನ್ನೇ ಕಡಲಿಗರು ಅಥವಾ ಮೀನುಗಾರರು ಎಂದು ಗುರುತಿಸಲಾಗಿದೆ. ಹೀಗೆ ಕನ್ನಡ ನಾಡಿನ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ಕಡಲಿಗರ ಕುರಿತು ಅಧ್ಯಯನ ನಡೆಸಿದವರು ವಿರಳ. ಅಂತಹ ಕಡಲಿಗ ಜನಾಂಗದವರ ಸಂಸ್ಕೃತಿಯ ಕುರಿತು ಹಲವು ಮಗ್ಗುಲುಗಳಿಂದ ಸಮಗ್ರವಾಗಿ ಅಧ್ಯಯನ ನಡೆಸಿದ ಹೆಗ್ಗಳಿಕೆ ಡಾ.ಶ್ರೀಧರಗೌಡ ಉಪ್ಪಿನಗಣಪತಿ ಅವರದ್ದು.
ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಧರರು, ಬಾಲ್ಯದಲ್ಲೇ ಕಡಲಿಗರ ಕುರಿತಾಗಿ ಆಕರ್ಷಿತರಾಗಿದ್ದರು. ಅಷ್ಟೇ ಅಲ್ಲ ಅವರ ಕುರಿತು ಸಂಶೋಧನೆಯನ್ನೂ ಕೈಗೊಳ್ಳಬೇಕೆಂಬ ಆಸೆ ಚಿಗುರೊಡೆದಿತ್ತು. ಪರಿಣಾಮ ಸ್ನಾತಕೋತ್ತರ ಪದವಿ ಪಡೆದ ಬಳಿಕ ಸಂಶೋಧನೆ ನಡೆಸುವ ಕನಸನ್ನು ಹೊತ್ತು, ಮಾರ್ಗದರ್ಶನಕ್ಕಾಗಿ ಡಾ.ಶ್ರೀಪಾದ ಶೆಟ್ಟಿ ಅವರ ಬಳಿ ಹೋದಾಗ ಶ್ರೀಪಾದರು ತೋರಿಸಿದ್ದು, ಡಾ.ಸೈಯದ್ ಝಮೀರುಲ್ಲಾ ಷರೀಫ್ ಅವರನ್ನ. ಸೈಯದ್ ಝಮೀರುಲ್ಲಾ ಷರೀಫ್ ಅವರ ಮಾರ್ಗದರ್ಶನದಲ್ಲಿ ಕಡಲಿಗರ ಜೀವನ, ಸಾಹಿತ್ಯ, ನಂಬುಗೆ ಹೀಗೆ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು. ಅಂತಹ ಕಡಲಿಗರ ಕುರಿತಾದ ಸಂಶೋಧನಾ ಗ್ರಂಥವೇ "ಕಡಲಿಗರ ಸಂಸ್ಕೃತಿ". ಈ ಪುಸ್ತಕವನ್ನು ಅದಿತಿ ಪ್ರಕಾಶನದವರು ಪ್ರಕಾಶಿಸಿದ್ದು, 2017 ರಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡಿದೆ.
ಈ ಕೃತಿ ಭವಿಷ್ಯದ ಕಡಲಿಗರ ಪೀಳಿಗೆಗೆ ಕೊಡುಗೆಯಾಗಿದೆ. ಕಡಲಿಗರ ಮೂಲದ ಕುರಿತು ಹಲವಾರು ಅಭಿಪ್ರಾಯಗಳು, ಕಥೆಗಳು ಇವೆ. ಈ ಸೀಮೆಯಲ್ಲಿ ಬೋವಿ, ಹರಿಕಾಂತ, ಖಾರ್ವಿ, ಮೊಗವೀರ, ಅಂಬಿಗ, ಪಾಗಿ ಮತ್ತು ನಾಖುದಾ ಹೀಗೆ ಕಡಲಿಗರು ಕಡಲನ್ನೇ ನಂಬಿ ಸಮುದ್ರದೊಂದಿಗೆ ಬದುಕನ್ನು ಸಾಗಿಸುತ್ತಾ ವಿಶೇಷ ವರ್ಗವಾಗಿ ಗುರುತಿಸಿಕೊಂಡವರು.
ನೂರಾರು ಜನರನ್ನು ಭೇಟಿಯಾಗಿ, ನೂರಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್ ಆಕರ ಗ್ರಂಥಗಳನ್ನು ಅಭ್ಯಸಿಸಿ ಡಾ.ಶ್ರೀಧರ ಗೌಡ ಅವರು ಸಿದ್ಧಪಡಿಸಿದ ಈ ಕೃತಿಯಲ್ಲಿ
ಕಡಲಿಗರ ಸಂಸ್ಕೃತಿಯ ಮೂಲವನ್ನು ಚಿತ್ರಿಸಿದ್ದಾರೆ. ಗ್ರಂಥದಲ್ಲಿ ಚಿತ್ರಗಳಿವೆ, ರೇಖಾಚಿತ್ರಗಳಿವೆ. ಹುಟ್ಟು, ಮದುವೆ, ಸಾವಿನ ಸಂದರ್ಭದಲ್ಲಿ ಆಚರಿಸಲ್ಪಡುವ ಸಂಪ್ರದಾಯಗಳು, ವಸತಿ ವ್ಯವಸ್ಥೆಯ ಕುರಿತಾದ ವಿವಿಧ ಚಿತ್ರಣಗಳು, ಒಳಾಡಳಿತ ವ್ಯವಸ್ಥೆ, ಕಡಲಿಗರ ಸೀಮೆಗಳು, ನಾಖುದಾ ಸಮುದಾಯದ ಮೊಹಲ್ಲಾಗಳು, ಆಹಾರ ಸ್ವರೂಪ, ಉಡುಗೆ-ತೊಡುಗೆ, ದೇವತಾರಾಧನೆ, ಹಬ್ಬಗಳು, ಸಮಾಜ, ಕುಟುಂಬ, ಆಟಗಳು, ಬಲೆಗಳನ್ನು ಸಿದ್ಧಪಡಿಸುವ ಕಲೆ ಹೀಗೆ ಹತ್ತು ಅಧ್ಯಾಯಗಳಲ್ಲಿ ಕಡಲಿಗರ ಬಹುಮುಖವನ್ನು ಇಲ್ಲಿ ವಿವರಿಸಲಾಗಿದೆ. ಕಡಲಿಗರ ಆತಿಥ್ಯ, ನಂಬುಗೆಗಳು, ಗಾದೆ ಮಾತು, ಒಗಟುಗಳು ಹೀಗೆ ಕಡಲಿಗರು ಹೀಗಿದ್ದರು ಎಂಬುದನ್ನು ಅರಿಯಲು ಗ್ರಂಥ ಸಹಕಾರಿಯಾಗಿದೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಶ್ರೀಧರ ಗೌಡ ಅವರ ಕೊಡುಗೆ ಹಲವು ಸಮಾಜದ ಮಧ್ಯೆ ಕಡಲಿಗರ ನಿಜದರ್ಶನ ಮಾಡಿಸುತ್ತದೆ.
-ಎಂ.ಎಸ್.ಶೋಭಿತ್ ಮೂಡ್ಕಣಿ
No comments:
Post a Comment