ನಲುಮೆಯ ಓದುಗರೇ,
ನವೆಂಬರ್ 23 ಮತ್ತು 24 ರಂದು ಯಾದಗಿರಿ ಜಿಲ್ಲೆಯ ಶಹಾಪುರದ ಮಕ್ಕಳ ಸಾಹಿತ್ಯಾಸಕ್ತ ಬಳಗದ ಸಂಧ್ಯಾ ಮಕ್ಕಳ ಸಾಹಿತ್ಯ ವೇದಿಕೆ; ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಂಚಖಂಡಿ ಬಿ.ಕೆ.ಯ ಶ್ರೀಮಲ್ಲಪ್ಪಣ್ಣಾ ನೀಲಿ ಪ್ರೌಢಶಾಲೆಯಲ್ಲಿ ಸಂಧ್ಯಾ ಮಕ್ಕಳ ಸಾಹಿತ್ಯೋತ್ಸವ ನಡೆಸಿದರು. ಆ ಕಾರ್ಯಕ್ರಮದಲ್ಲಿ ಈ ಬಾರಿಯ `ವಿದ್ಯಾಸಾಗರ ಬಾಲ ಪುರಸ್ಕಾರ' ಪಡೆಯಲು ವೇದಿಕೆಯ ಸಂಚಾಲಕ ರಾಜಶೇಖರ ಕುಕ್ಕುಂದಾ ಅವರು ನನ್ನನ್ನು ಆಹ್ವಾನಿಸಿದ್ದರು. ಈ ಕಾರ್ಯಕ್ರಮದ ಆಮಂತ್ರಣದಲ್ಲಿ ನನ್ನ ಹೆಸರು ನೋಡಿದಾಕ್ಷಣ ಗೆಳೆಯರು, ಬಂಧು-ಮಿತ್ರರು ಸಂಭ್ರಮಿಸಿ, ಅಭಿನಂದಿಸಿ, ಹಾರೈಕೆಗಳ ಸುರಿಮಳೆಗೈದಿದ್ದರು. ಧಾರವಾಡದ ಡಾ.ಆನಂದ ಪಾಟೀಲ ಅವರು ಇದು ನಿನಗೆ ಸಿಕ್ಕಿರುವ ಅವಕಾಶ ಚೆನ್ನಾಗಿ ಮಾತನಾಡು, ಶುಭವಾಗಲಿ ಎಂದಿದ್ದರು.
ನನಗೆ ಒಳಗೊಳಗೇ ತಳಮಳ. ಕಾರಣ ವೇದಿಕೆಯಲ್ಲಿ ಚೆನ್ನಾಗಿ ಮಾತನಾಡಲು ಬರುತ್ತಿರಲಿಲ್ಲ! ಆದರೂ ಒಂದು ರೀತಿಯ ತವಕ. ಬಾಗಲಕೋಟೆಗೆ ಹೊರಡುವ ಹಿಂದಿನ ದಿನ ನ.22ರಂದು ವೇದಿಕೆಯಲ್ಲಿ ಏನು ಮಾತನಾಡಲಿ ಎಂಬ ಕುರಿತು ಟಿಪ್ಪಣಿ ಸಿದ್ಧಪಡಿಸಿದೆ. ಅದರಲ್ಲಿ ಮಕ್ಕಳಿಗೆ ಹೇಳಬೇಕಾದ ಕತೆ, ಹೇಳಿಕೆ, ಭಾಷಣದ ಪ್ರಾರಂಭ, ಭಾಷಣದ ಮುಕ್ತಾಯ..... ಹೀಗೆ ವಿಭಾಗಿಸಿಕೊಂಡು ಒಂದು ಚೀಟಿ ಸಿದ್ಧಪಡಿಸಿಕೊಂಡೆ. ಕುಕ್ಕುಂದಾ ಸರ್ ಅವರಿಗೆ ಫೋನ್ ಮಾಡಿ ಮೊದಲೇ ನನ್ನ ಮಾತಿನ ಸಮಯವನ್ನು ನಿಗದಿಪಡಿಸಿಕೊಂಡಿದ್ದೆ. ಆದರೂ ಅವರು ನೀಡಿದಷ್ಟು ಸಮಯ ನಾನು ಮಾತನಾಡಲಿಲ್ಲ! ಅದು ಬೇರೆ ವಿಷಯ.
ಅಂದು ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಾಗರ ಬಾಲ ಪುರಸ್ಕಾರ ಪಡೆದ ನಂತರ ನನ್ನ ಭಾಷಣದ ಸರದಿ ಬಂತು. ಭಾಷಣದ ಪ್ರಾರಂಭದಲ್ಲಿ ನನ್ನ ನೆಚ್ಚಿನ ಕವಿ ಜಯಂತ ಕಾಯ್ಕಿಣಿಯವರ `ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ' ಎಂಬ ಮಹಾತ್ಮಾ ಗಾಂಧಿಯವರ ಪ್ರಾರ್ಥನಾ ಸಭೆಯ ಪದ್ಯವನ್ನು ಪ್ರಸ್ತುತಪಡಿಸಿ ಮಾತನಾಡಬೇಕೆಂದಿದ್ದೆ. ಆದರೆ ವೇದಿಕೆಯಲ್ಲಿ ನೆನಪಾಗಲೇ ಇಲ್ಲ.
ಪ್ರಶಸ್ತಿ ಸ್ವೀಕರಿಸಿ ಮೊದಲನೆಯದಾಗಿ ನನ್ನ ಎಲ್ಲಾ ಸಾಹಿತ್ಯಿಕ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಿರುವ ನನ್ನ ತಂದೆ-ತಾಯಿ, ಅಣ್ಣ, ಅಜ್ಜಿ, ಚಿಕ್ಕಪ್ಪ ಮತ್ತು ಕುಟುಂಬ ವರ್ಗವನ್ನು ಮನಸಾರೆ ಸ್ಮರಿಸಿದೆ. ಅವರೆಲ್ಲರ ಸಹಾಯ-ಸಹಕಾರ, ಮಾರ್ಗದರ್ಶನ, ಆಶೀರ್ವಾದಗಳು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಬರವಣಿಗೆಗೆ ಒಂದು ರೀತಿಯಲ್ಲಿ ಪ್ರಭಾವ ಬೀರಿದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೆನೆದೆ. ಮುಖ್ಯವಾಗಿ ನೆಚ್ಚಿನ ಶಿಕ್ಷಕರಾಗಿದ್ದ ಆರ್.ಬಿ.ನಾಯಕ, ವಿದ್ಯಾ ಹೆಗಡೆ, ಎಂ.ಎಂ.ನಾಯ್ಕ, ಕೃಷ್ಣ ಹೆಗಡೆ ಇವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದೆ.
ಇಂದು ನಮ್ಮಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ. ಅಪ್ಪ-ಅಮ್ಮ, ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಸಮಾಜದ ಪ್ರತಿಯೊಬ್ಬರ ಜೊತೆಯೂ ಸಂಬಂಧ ಕಡಿಮೆಯಾಗುತ್ತಿದೆ. ಅಲ್ಲದೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಇಲ್ಲವಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೇಗಿದೆಯೆಂದರೆ ಮಕ್ಕಳು ಪಾಯೀಖಾನೆಗಳಲ್ಲಿಯೂ ಮೊಬೈಲ್ ಬಳಸುತ್ತಿದ್ದಾರೆ. ನಿಂತಲ್ಲಿ, ಕೂತಲ್ಲಿ ಮೊಬೈಲ್‌ಗಳೇ ಅವರ ಜಗತ್ತಾಗಿದೆ. ಪಬ್ಜಿಯಂತಹ ಆನ್‌ಲೈನ್ ಗೇಮ್‌ಗಳ ದಾಸರಾಗಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಮಕ್ಕಳ ಸಾಹಿತ್ಯಾಸಕ್ತ ಬಳಗದ ಸಂಧ್ಯಾ ಸಾಹಿತ್ಯ ವೇದಿಕೆ ಮಕ್ಕಳು ಮತ್ತು ಮಕ್ಕಳ ಸಾಹಿತ್ಯಕ್ಕಾಗಿ ಮೀಸಲಿಟ್ಟುಕೊಂಡು ಇತ್ತೀಚೆಗೆ ಬೆಳ್ಳಿಹಬ್ಬ ಆಚರಿಸಿಕೊಂಡ ನೋಂದಾವಣಿಯಿಲ್ಲದೇ, ಸರ್ಕಾರದ ಯಾವುದೇ ಸಹಾಯವಿಲ್ಲದೇ ನಡೆಯುತ್ತಿರುವ ಈ ವೇದಿಕೆ ಕಳೆದ 20 ವರ್ಷಗಳಿಂದ ಬಸ್ ಅಪಘಾತದಲ್ಲಿ ಅಪಮೃತ್ಯುವಿಗೆ ಸಿಲುಕಿದ ಬಾಲಕವಿ ವಿದ್ಯಾಸಾಗರ ಕುಕ್ಕುಂದಾ ಹೆಸರಿನಲ್ಲಿ ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ ಬಾಲ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂಚಾಲಕ ರಾಜಶೇಖರ ಕುಕ್ಕುಂದಾ, ಡಾ. ಆನಂದ ಪಾಟೀಲ, ವೇದಿಕೆ ಅಧ್ಯಕ್ಷ ರವಿ ಹಿರೇಮಠ ಇವರಿಗೆ ಕೃತಜ್ಞತೆ ಸಲ್ಲಿಸಿದೆ.
ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಅವರಿಗೆ ಒಂದು ಕತೆ ಹೇಳಿದೆ. `ಒಂದು ರಾಜ್ಯದಲ್ಲಿ ಒಮ್ಮೆ ರಾಜ ಐತಿಹಾಸಿಕ ಸ್ಥಳ, ಪುಣ್ಯಕ್ಷೇತ್ರಗಳ ಭೇಟಿ ಮಾಡುವ ಯೋಚನೆ ಮಾಡಿದ. ಅಲ್ಲದೇ ನಡೆದುಕೊಂಡೇ ಪ್ರವಾಸ ಮಾಡಬೇಕೆಂದು ಸಂಕಲ್ಪಿಸಿದ. ಜನರು ಹೇಗೆ ಜೀವಿಸುತ್ತಿದ್ದಾರೆ? ಅವರಿಗೆ ಏನಾದರೂ ಕೊರತೆ ಇದೆಯೇ? ಜೀವನ ಮಟ್ಟ ಹೇಗಿದೆ ಎಂದು ತಿಳಿದುಕೊಳ್ಳುವ ಕಾತರ ರಾಜನದ್ದಾಗಿತ್ತು. ಹೀಗಾಗಿ ಜನರೊಂದಿಗೆ ಸಂವಹನ ಮಾಡಿದರೆ ಸೂಕ್ತ ಎಂದು ಲೆಕ್ಕ ಹಾಕಿದ. ಜನರು ಒಳ್ಳೆಯ ರಾಜ ಸಿಕ್ಕಿದ್ದಾನೆಂದು ಖುಷಿ ಪಟ್ಟಿದ್ದರು. ರಾಜ ಪ್ರವಾಸ ಆರಂಭಿಸಿದ. ಜನರೆಲ್ಲರೂ ನೆಮ್ಮದಿಯಿಂದ ಇದ್ದಾರೆ ಎಂದು ತಿಳಿದು ಬಹಳ ಖುಷಿ ಪಟ್ಟ. ಪುಣ್ಯಕ್ಷೇತ್ರ, ಐತಿಹಾಸಿಕ ಸ್ಥಳ ದರ್ಶನ ಆಯಿತು. ಹಲವಾರು ವಾರಗಳ ಕಾಲ ಕಾಲುನಡಿಗೆಯಲ್ಲೇ ಪ್ರಯಾಣ ಮುಗಿಸಿದ. ಆಮೇಲೆ ಅವನಿಗೆ ಕಾಲು ನೋವು ಆರಂಭವಾಯಿತು. ನೋವು ತಡೆಯಲು ಆಗಲೇ ಇಲ್ಲ. ಮೊದಲ ಬಾರಿಗೆ ನಡೆದೇ ಪ್ರಯಾಣಿಸಿದ್ದ. ಮಂತ್ರಿಗಳನ್ನು ಕರೆಸಿ `ರಸ್ತೆ ಸರಿಯಿಲ್ಲ, ಪೂರ್ತಿ ಕಲ್ಲುಗಳಿಂದ ತುಂಬಿವೆ. ಹೀಗಾಗಿ ನನಗೆ ಕಾಲು ನೋವು ಬಂದಿದೆ. ಹೀಗಾದರೆ ಸಾಮಾನ್ಯ ಜನರ ಪಾಡೇನು?' ಎಂದು ಪ್ರಶ್ನಿಸಿ, ಆಮೇಲೆ ಅವನೇ ಯೋಚಿಸಿ `ಸಾವಿರಾರು ಕಿ.ಮೀ. ವ್ಯಾಪ್ತಿಯುಳ್ಳ ದೇಶದ ಉದ್ದಗಲಕ್ಕೂ ರಸ್ತೆಗೆ ಚರ್ಮದ ಹೊದಿಕೆ ಹಾಕಿರಿ, ಆಗ ಎಲ್ಲರೂ ಆರಾಮದಾಯಕವಾಗಿ ನಡೆಯಬಲ್ಲರು' ಎಂದು ಅಪ್ಪಣೆ ಮಾಡಿದ. ಇದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಂತ್ರಿಗಳು ಚಿಂತಾಕ್ರಾಂತರಾದರು. ಕೊನೆಯಲ್ಲಿ ಒಬ್ಬ ವಯಸ್ಸಾದ ಮಂತ್ರಿ ಎದ್ದು ಬಂದು ನನ್ನ ಬಳಿ ಇನ್ನೊಂದು ಉಪಾಯವಿದೆ ಎಂದಾಗ, ರಾಜ ಆಶ್ಚರ್ಯದಿಂದ `ಯಾವುದು ಆ ಉಪಾಯ?' ಎಂದು ಕೇಳಿದ. ಆಗ ವೃದ್ಧ ರಸ್ತೆಗೆ ಚರ್ಮದ ಹೊದಿಕೆ ಹಾಕುವುದರ ಬದಲು ಚರ್ಮದ ತುಂಡೊಂದನ್ನು ನಿಮ್ಮ ಕಾಲಿನ ಆಕಾರಕ್ಕೆ ತಕ್ಕಂತೆ ರೂಪುಗೊಳಿಸಿ ಎರಡೂ ಪಾದಗಳಿಗೆ ಹಾಕಿಕೊಳ್ಳಬಹುದಲ್ಲವೇ?' ಎಂದ. ಅವನ ಉಪಾಯ ಕೇಳಿ ರಾಜನಿಗೆ ತುಂಬಾ ಖುಷಿಯಾಯಿತು. ಒಂದು ಜತೆ ಚಪ್ಪಲಿ ಹೊಲಿದು ತರಲು ಆದೇಶಿಸಿದ. ಎಂದು ಹೇಳಿ ಪ್ರಪಂಚವನ್ನು ಬದಲಿಸುವ ಉದ್ದೇಶವನ್ನು ಮೊದಲು ಬದಿಗಿಟ್ಟು ನಾವು ಬದಲಾಗಬೇಕು ಎಂಬ ನೀತಿಯನ್ನು ಗೆಳೆಯರಿಗೆ ವಿವರಿಸಿದೆ.
ಜಯಂತ ಕಾಯ್ಕಿಣಿ ಅವರ `ಬೊಗಸೆಯಲ್ಲಿ ಮಳೆ', `ಶಬ್ದತೀರ', `ತೆರೆದಷ್ಟೇ ಬಾಗಿಲು', ಜೋಗಿ ಅವರ `ಲೈಫ್ ಈಸ್ ಬ್ಯೂಟಿಫುಲ್', ಭೈರಪ್ಪ ಅವರ `ಗೃಹಭಂಗ', ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಶಿವರಾಮ ಕಾರಂತ, ಯಶವಂತ ಚಿತ್ತಾಲ ಇವರುಗಳ ಪುಸ್ತಕಗಳು ನಮ್ಮಲ್ಲಿ ಬರವಣಿಗೆಯನ್ನು ಪ್ರೇರೇಪಿಸುತ್ತದೆ. ಇಂತಹ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ತಮ್ಮದಾಗಿಸಿಕೊಳ್ಳಲು ಸ್ನೇಹಿತರಿಗೆ ಕರೆ ನೀಡಿದೆ.
ನನ್ನ ಹಲವಾರು ಲೇಖನಗಳನ್ನು ಪ್ರಕಟಿಸಿ ಹವ್ಯಾಸಿ ಬರಹಗಾರನಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿದ ವಿಜಯವಾಣಿ, ಪ್ರಜಾವಾಣಿ, ಹೊಸದಿಗಂತ, ವಿಶ್ವವಾಣಿ, ಜನಮಾಧ್ಯಮ, ನಾಗರಿಕ, ಹಸಿರುವಾಸಿ ಪತ್ರಿಕೆಗಳ ಸಂಪಾದಕೀಯ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹವ್ಯಾಸಿ ವರದಿಗಾರನಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿದ ಕರಾವಳಿ ಮುಂಜಾವು, ಕಡಲವಾಣಿ, ಆನ್‌ಲೈನ್ ಮಾಧ್ಯಮಗಳಾದ ಸತ್ವಾಧಾರ ನ್ಯೂಸ್‌ಗೂ ಆಭಾರಿಯಾಗಿದ್ದೇನೆ. ಹೊನ್ನಾವರದ ಮತ್ತು ಕಾರವಾರದ ಅನೇಕ ಹಿರಿ-ಕಿರಿಯ ಪತ್ರಿಕಾ ಮಿತ್ರರ ಸಹಕಾರ ಕೂಡ ಮರೆಯುವಂತಿಲ್ಲ. ಅವರಿಗೂ ನಾನು ಆಭಾರಿ ಎಂದೆ. ಅಷ್ಟರಲ್ಲಿ ಸಮಯವಾಗುತ್ತಾ ಬಂತು. ಸಭೆಗೆ ಕೈ ಮುಗಿದು ಮಾತಿಗೆ ಪೂರ್ಣವಿರಾಮ ಇಟ್ಟು ವಿರಮಿಸಿದೆ.
ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತರಾದ ಆತ್ಮೀಯ ಡಾ.ಆನಂದ ಪಾಟೀಲ ಅವರು ಒಂದು ಬ್ಯಾಗ್‌ನಲ್ಲಿ ಪತ್ರಿಕೋದ್ಯಮ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ತುಂಬಿ ಕೊಡುಗೆಯಾಗಿ ನೀಡಿ, ಅವರೊಂದಿಗಿನ ನನ್ನ ಸ್ನೇಹ ಸಂಬಂಧವನ್ನು ಎಳೆಎಳೆಯಾಗಿ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಲ್ಲೇ ಕೆಲ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದರು. ಏನೇ ಆದರೂ ಗೌರವ ಉಪಸ್ಥಿತಿ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಂ.ಪೆಟ್ಲೂರ್ ಮಾತ್ರ ಕೊನೆಯಲ್ಲಿ `ವಿದ್ಯಾಸಾಗರ ಬಾಲ ಪುರಸ್ಕಾರ ಪಡೆದ ಶೋಭಿತನಿಗೆ ಇದು ಭಾಗ್ಯವಾದರೆ, ಅದನ್ನು ನೋಡಿ ಆನಂದಿಸುವ ನಮಗೆ ಸೌಭಾಗ್ಯವಲ್ಲವೇ?' ಎಂದು ಹೇಳಿ ಉತ್ತಮ ಅಭಿರುಚಿ ಬೆಳೆಸಿಕೊಂಡು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೀಗೇ ಮುಂದುವರಿ ಎಂದು ಹಾರೈಸಿ ಅವರ ಸ್ವರಚನೆಯ ಎಕ್ಸಲೆಂಟ್ ಗ್ರಾಮರ್ ಪುಸ್ತಕ ನೀಡಿದರು. ಹಿರಿಯ ಕಥೆಗಾರ ಮತ್ತೂರು ಸುಬ್ಬಣ್ಣ ಹಸ್ತಾಕ್ಷರದೊಂದಿಗೆ ತಮ್ಮ ಪುಸ್ತಕ ನೀಡಿ ಶುಭ ಹಾರೈಸಿದರು.
ಹಿರಿಯರಾದ ಪತ್ರಕರ್ತ ಉದಯ ಕುಲಕರ್ಣಿ, ಜಿ.ಡಿ.ಹೊಂಬಳ, ಶ್ರೀಶೈಲ ನೀಲಿ, ಅಕ್ಬರ್ ಕಾಲಿಮಿರ್ಚಿ, ಕಾಡಣ್ಣಾ ಹೊಸಹಟ್ಟಿ, ಪರಮೇಶ್ವರ ಸೊಪ್ಪಿಮಠ, ರೇಣುಕಾ ಕುಕ್ಕುಂದಾ, ಶಿವಲಿಂಗಪ್ಪ ಹಂದಿಹಾಳರಂತಹ ಹಲವು ಸಾಹಿತ್ಯಿಕ ಮಿತ್ರರು ಅಭಿಮಾನದ ನುಡಿಯಿಂದ ನನ್ನನ್ನು ಹರಸಿದರು.
ಹಿತ ನೀಡಿದ ನೀಲಿ ಶಾಲೆಯ ಹಸಿರು ಪರಿಸರ..!:
ಸಾಹಿತ್ಯೋತ್ಸವ ಆಯೋಜನೆಗೊಂಡಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಂಚಖಂಡಿ ಬಿ.ಕೆ.ಯ ಶ್ರೀ ಮಲ್ಲಪ್ಪಣ್ಣಾ ನೀಲಿ ಪ್ರೌಢಶಾಲೆಯ ಹಸಿರು ಪರಿಸರ ಮನಸ್ಸಿಗೆ ಹಿತ ನೀಡಿದ್ದಂತೂ ಸತ್ಯ. ಒಬ್ಬ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ಶ್ರೀ ಬಸವೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಇಂದು ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ ಸರಿಸುಮಾರು 500 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ವಸತಿ ಸೇವೆ ನೀಡುತ್ತಾ ಮಕ್ಕಳ ಪ್ರೀತಿಯ ಆದರ್ಶ ಗುರುವಾದವರು ಶ್ರೀಶೈಲ ನೀಲಿ. ಕಾರ್ಯಕ್ರಮದ ಪ್ರಾರಂಭದಿಂದ ಮುಕ್ತಾಯದ ತನಕ ಪ್ರತಿಯೊಂದು ಕಾರ್ಯಕ್ರಮಗಳಿಗೂ ಸಹಾಯ ಸಹಕಾರ ನೀಡುತ್ತಾ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ವ್ಯವಸ್ಥೆ ನೀಡಿ ಪ್ರೋತ್ಸಾಹಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಹಾಗೇ ಹೊರಡುತ್ತೇವೆ ಎಂದರೆ `ನಾವೇನು ನಿಮಗೆ ಅನ್ನದಲ್ಲಿ ಕಲ್ಲು ಹಾಕಿ ಕೊಡ್ತೇವೇನ್ರೀ? ಎಲ್ಲಾ ವ್ಯವಸ್ಥೆ ಆಗಿದೆ. ಊಟ ಮಾಡ್ಕೊಂಡು ಹೋಗಿ' ಅಂತ ಹೇಳುವಾಗ ಅವರಲ್ಲಿರುವ ಪ್ರೀತಿ ಕಂಡಿತು. ನೀವೆಲ್ಲಾ ಎರಡು ದಿನಗಳಿಂದ ಇಲ್ಲಿದ್ರಿ, ಆದ್ರೆ ಇವತ್ತು ನೀವೆಲ್ಲಾ ಇರಲ್ಲ. ಇದು ನಮಗೆ ಒಂಥರಾ ಬೇಸರ ಕಣ್ರೀ. ನೀವು ಏನೇ ಕಾರ್ಯಕ್ರಮ ನಡೆಸೋದಿದ್ರೂ ಬನ್ನಿ ನಾನು ಖಂಡಿತಾ ಸಹಾಯ ಮಾಡುವೆ' ಎಂದು ನಗು ಮೊಗದಿಂದ ಬೀಳ್ಕೊಟ್ಟರು. ಹಾಗಾಗಿ ಮಲ್ಲಪ್ಪಣ್ಣಾ ನೀಲಿ ಶಾಲೆ, ಅಲ್ಲಿಯ ಮುದ್ದು ವಿದ್ಯಾರ್ಥಿಗಳು ಮುಖ್ಯವಾಗಿ ಶ್ರೀಶೈಲ ನೀಲಿ ಅವರನ್ನ ಮರೆತೇನೆಂದರೆ ಮರೆಯಲಿ ಹ್ಯಾಂಗ..?
(2019 ರ ನವೆಂಬರ್ 23 ಮತ್ತು 24 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳದ ಚಿಂಚಖಂಡಿ ಬಿ.ಕೆ. ಯ ಶ್ರೀಮಲ್ಲಪ್ಪಣ್ಣಾ ನೀಲಿ ಪ್ರೌಢಶಾಲೆಯಲ್ಲಿ ಸಂಧ್ಯಾ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ "ಸಂಧ್ಯಾ ಮಕ್ಕಳ ಕಾವ್ಯೋತ್ಸವದಲ್ಲಿ " ವಿದ್ಯಾಸಾಗರ ಬಾಲ ಪುರಸ್ಕಾರ " ಸ್ವೀಕರಿಸಿ ಮಾತನಾಡಿದ ಆಯ್ದ ಭಾಗ ಇದಾಗಿದೆ.)
(ಇದು ನಾಗರಿಕ ವಾರಪತ್ರಿಕೆಯ 2019 ಡಿಸೆಂಬರ್ 16-23 ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)
No comments:
Post a Comment