ಪ್ರತಿದಿನ ಬೆಳಿಗ್ಗೆ ದಿನಪತ್ರಿಕೆಯನ್ನು ಹಿಡಿದ ಕೂಡಲೇ ಸುದ್ದಿಯನ್ನು ಓದುವುದಕ್ಕಿಂತ ಮೊದಲು ವ್ಯಂಗ್ಯಚಿತ್ರಗಳನ್ನು ನೋಡುವವರೇ ಬಹಳಷ್ಟು ಮಂದಿ. ಸಾವಿರಾರು ಅಕ್ಷರಗಳ ನಡುವೆ ಇರುವ ವಿಶಿಷ್ಟ ರೇಖೆಗಳನ್ನು ನೋಡಿದಾಗ ಓದುಗರಿಗೊಂದು ಸೋಜಿಗ. ಕಾರ್ಟೂನ್‌ಗಳ ಹರವು ಬಹಳ ವಿಸ್ತಾರವಾದದ್ದು. ಅವುಗಳಿಗೆ ಯಾವುದೇ ಭಾಷೆಯ ಬೇಲಿಗಳು ಎದುರಾಗುವುದಿಲ್ಲ. ನೂರಾರು ಪುಟಗಳಲ್ಲಿ ಅಥವಾ ಸಾವಿರಾರು ಶಬ್ದಗಳಲ್ಲಿ ಬರೆದಿದ್ದನ್ನು ಓದುವವರು ಬಹಳ ಕಮ್ಮಿ. ಅದೇ ಡೊಂಕು ರೇಖೆಗಳ ಮೂಲಕ ಬರೆದ ಚಿತ್ರಗಳು ಜನಸಾಮಾನ್ಯರಿಗೆ ಬೇಗನೆ ತಲುಪುತ್ತದೆ. ಲಲಿತ ಕಲೆಗಳಲ್ಲಿ ಚಿತ್ರಕಲೆಗೆ ವಿಶೇಷವಾದ ಸ್ಥಾನವಿದೆ. ವ್ಯಂಗ್ಯಚಿತ್ರಗಳನ್ನು ನೋಡಿದ ತಕ್ಷಣ ನಗೆ ಮೂಡಿದರೆ ಅದು ನೆನಪಿನಲ್ಲಿ ಉಳಿಯುತ್ತದೆ. ಕಾರ್ಟೂನ್ ಜಗತ್ತಿನಲ್ಲಿ ಹೆಸರು ಮಾಡಿದ ಅನೇಕ ಕಲಾವಿದರು ಕರ್ನಾಟಕದಲ್ಲಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಗಮನಾರ್ಹ ಸಂಗತಿಯೆಂದರೆ ವ್ಯಂಗ್ಯಚಿತ್ರಗಳನ್ನು ಬರೆದವರೆಲ್ಲಾ ಖ್ಯಾತರಾಗಿಲ್ಲ!
ಇನ್ನು ಸಾಮಾಜಿಕ ತಲ್ಲಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವ್ಯಂಗ್ಯಚಿತ್ರಗಳ ಪಾತ್ರ ಮಹತ್ವದ್ದು. ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದಲ್ಲಿ ವ್ಯಂಗ್ಯಚಿತ್ರಕಾರನಿಗೆ ಎಲ್ಲವೂ ವಿಷಯಗಳೆ. ಗಾಳಿ, ಮಳೆ, ಬಿಸಿಲು, ರಾಜಕೀಯ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ, ಗಲಭೆ, ಶಿಕ್ಷಣ, ವಿಜ್ಞಾನ... ಹೀಗೆ ಎಲ್ಲಾ ವಿಷಯಗಳ ಕುರಿತು ಕಾರ್ಟೂನಿಸ್ಟ್‌ಗಳು ಜಾಗೃತಿ ಮೂಡಿಸುತ್ತಾರೆ.
'ಚಿತ್ರಕಲೆ' ಎಂಬುದು ಹಣ ಗಳಿಕೆಗಾಗಿ ಅಥವಾ ವೃತ್ತಿಗಾಗಿ ಅಲ್ಲ. ಇದೊಂದು ಖುಷಿ ಕೊಡುವ ಹವ್ಯಾಸ. ಹಾಗೆ ನೋಡಿದರೆ ಕಾರ್ಟೂನ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಬಹುತೇಕ ವ್ಯಂಗ್ಯಚಿತ್ರಕಾರರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಕಾರ್ಟೂನ್ ರಚಿಸಿದವರು. ಆರ್.ಕೆ.ಲಕ್ಷ್ಮಣ ಸಾಹಿತಿಯಾಗಿದ್ದವರು, ಮೇಗರವಳ್ಳಿ ಸುಬ್ರಹ್ಮಣ್ಯ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾಗಿ, ಪಿ.ಜಿ. ನಾರಾಯಣ ಬ್ಯಾಂಕ್ ಲೆಕ್ಕಾಧಿಕಾರಿಯಾಗಿ....ಹೀಗೆ ಇಂದಿನ ಯುವ ವ್ಯಂಗ್ಯಚಿತ್ರಕಾರರು ಕೂಡ ಬಹುತೇಕ ಶಿಕ್ಷಕ, ಇಂಜಿನಿಯರ್, ಡಾಕ್ಟರ್, ಬ್ಯಾಂಕಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಲೇ ಕಾರ್ಟೂನ್ ಲೋಕದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಇದೀಗ ಪ್ರಪಂಚದಾದ್ಯಂತ ಕರೋನಾ ಎಂಬ ಡೆಡ್ಲಿ ವೈರಸ್ ಆವರಿಸಿದ್ದು ಸದ್ಯ ದೇಶದಾದ್ಯಂತ ಲಾಕ್‌ಡೌನ್ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ವ್ಯಂಗ್ಯರೇಖೆಗಳ ಮೂಲಕ ಜಾಗೃತಿ ಕಾರ್ಯ ಮೂಡಿಸುತ್ತಿರುವ ಕೆಲವು 'ಕಲಾಲೋಕದ ಕೋವಿದ'ರನ್ನು ಪರಿಚಯ ಪರಿಚಯ ಮಾಡಿಕೊಳ್ಳೊಣ ಬನ್ನಿ.....
ನೀರ್ನಳ್ಳಿ ಗಣಪತಿ ಹೆಗಡೆ
ವೃತ್ತಿ: ನಿವೃತ್ತ ಚಿತ್ರಕಲಾ ಶಿಕ್ಷಕ, ಕಲಾವಿದ
ಊರು: ನೀರ್ನಳ್ಳಿ, ಶಿರಸಿ ತಾಲೂಕು (ಉ.ಕ.)
ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಮತ್ತು ಹಿರಿಯ ವ್ಯಂಗ್ಯಚಿತ್ರಕಾರರಲ್ಲೊಬ್ಬರು ನೀರ್ನಳ್ಳಿ ಗಣಪತಿ ಹೆಗಡೆ. ಇವರನ್ನು ಕಲಾ ಲೋಕದ 'ರೂಪಕ ಚಕ್ರವರ್ತಿ' ಎಂದು ಹೇಳಬಹುದು. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಾರಂಭದಲ್ಲಿ ನನ್ನೊಳಗಿದ್ದ ಹಾಸ್ಯಪ್ರಜ್ಞೆಯನ್ನು ಗುರುತಿಸಿ ಸಹೋದ್ಯೋಗಿ ಮಿತ್ರರು ಕಾರ್ಟೂನ್‌ಗಳನ್ನು ಬರೆಯುವಂತೆ ಪ್ರೋತ್ಸಾಹಿಸಿದರು. ಅಲ್ಲದೇ ಆ ದಿನಗಳಲ್ಲಿ ಖ್ಯಾತನಾಮರಾಗಿದ್ದ ಆರ್.ಕೆ.ಲಕ್ಷ್ಮಣರಂತಹ ಹಿರಿಯ ವ್ಯಂಗ್ಯಚಿತ್ರಕಾರಿಂದಲೂ ಸ್ಪೂರ್ತಿ ಪಡೆದ ಪರಿಣಾಮ ನಾನೊಬ್ಬ ವ್ಯಂಗ್ಯಚಿತ್ರಕಾರನಾಗಿ ಗುರುತಿಸಿಕೊಂಡೆ ಎನ್ನುತ್ತಾರೆ ನೀರ್ನಳ್ಳಿ ಗಣಪತಿ ಹೆಗಡೆ. ಕಲಾ ಜಗತ್ತಿನಲ್ಲಿ ತಾನು ಬೆಳೆಯುವುದಲ್ಲದೇ ತನ್ನ ಜೊತೆಗೆ ಯುವ ಕಲಾವಿದರನ್ನೂ ಬೆಳೆಸುವುದು ಇವರ ಹೆಗ್ಗಳಿಕೆ. ಇಂದಿನ ಬಹುತೇಕ ಯುವ ವ್ಯಂಗ್ಯಚಿತ್ರಕಾರರಿಗೆ ಇವರೊಬ್ಬ ಗಾಡ್ ಫಾದರ್ ಎಂದರೆ ತಪ್ಪಿಲ್ಲ. ಅಷ್ಟರ ಮಟ್ಟಿಗೆ ಚಿತ್ರಕಲೆ ಮತ್ತು ಕಾರ್ಟೂನ್ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಸಮಾಜದಲ್ಲಿರುವ ಕುಡಿತ, ಜೂಜು, ಅತ್ಯಾಚಾರ ಮುಂತಾದ ಪೀಡೆಗಳು, ರಾಜಕೀಯ, ಭ್ರಷ್ಟಾಚಾರ ಅನಾಚಾರಗಳ ಮೇಲೆ ವ್ಯಂಗ್ಯಚಿತ್ರಗಳು ರಚನೆಯಾಗುವುದರಿಂದ ಸಮಾಜದಲ್ಲಿ ಸತ್ಪರಿಣಾಮ ಆಗಬಹುದೆಂಬ ನಂಬಿಕೆಯಿಂದ ವ್ಯಂಗ್ಯಚಿತ್ರಗಳನ್ನು ರಚಿಸುತ್ತೇವೆ ಎನ್ನುವ ಇವರು ಲಾಕ್‌ಡೌನ್ ಸಮಯದಲ್ಲಿ ಶ್ರೀರಾಮಾಯಣದ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ಯುತ್ತಮ ಕಲಾ ಶಿಕ್ಷಕ, ಉತ್ತಮ ವ್ಯಂಗ್ಯಚಿತ್ರಕಾರ ಹೀಗೆ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ನಿವೃತ್ತಿಯ ನಂತರವೂ ಬಿಡುವಿಲ್ಲದ ಒಬ್ಬ ಆದರ್ಶ ಗುರುವಾಗಿ ನೀರ್ನಳ್ಳಿ ಗಣಪತಿ ಹೆಗಡೆಯವರು ಕಾಣ ಸಿಗುತ್ತಾರೆ.
ಜಿ.ಎಂ.ಬೊಮ್ನಳ್ಳಿ
ವೃತ್ತಿ: ಕಲಾ ಶಿಕ್ಷಕ, ವ್ಯಂಗ್ಯಚಿತ್ರಕಾರ
ಊರು: ಬೊಮ್ನಳ್ಳಿ, ಶಿರಸಿ ತಾಲೂಕು
ಉತ್ತರಕನ್ನಡ ಜಿಲ್ಲೆಯಲ್ಲಿಯೇ ಅತಿಹೆಚ್ಚು ಅಂದರೆ 20 ಸಾವಿರಕ್ಕೂ ಅಧಿಕ ಕಾರ್ಟೂನ್‌ಗಳನ್ನು ರಚಿಸಿದ ಹೆಗ್ಗಳಿಕೆ ಜಿ.ಎಂ.ಬೊಮ್ನಳ್ಳಿ ಅವರದ್ದು. ಶಿರಸಿಯಲ್ಲಿ ಬಿ.ಕಾಂ ಪದವಿ ಪಡೆದ ಇವರು ಬಳಿಕ ಚಿತ್ರಕಲಾ ಅಧ್ಯಯನ ಮಾಡುವ ಉದ್ದೇಶದಿಂದ ಧಾರವಾಡಕ್ಕೆ ತೆರಳಿದರು. ಧಾರವಾಡದಲ್ಲಿ ಡ್ರಾಯಿಂಗ್ ಡಿಪ್ಲೊಮಾ ಮಾಡುತ್ತಿರುವ ಸಂದರ್ಭದಲ್ಲೇ 1994 ರಿಂದ ಕಾರ್ಟೂನ್ ಬರೆಯಲು ಶುರು ಮಾಡಿದರು. ಅವರ ಚಿತ್ರವೇ ಎಲ್ಲವನ್ನೂ ಹೇಳುತ್ತವೆ. ಸರಳವಾಗಿ ಮತ್ತು ಡೊಂಕು ರೇಖೆಗಳ ಮೂಲಕ ವಿಡಂಬನೆಯನ್ನು ಹೊರಹಾಕುವ ಇವರ ಈ ವ್ಯಂಗ್ಯಚಿತ್ರಗಳನ್ನು ಯಾರೂ ಮೆಚ್ಚಬಹುದು. ಸಾಮಾಜಿಕ ಜಾಗೃತಿ ವಿಷಯದಲ್ಲಿ ಕಾರ್ಟೂನ್‌ಗೆ ವಿಶೇಷ ಮಹತ್ವ ಇದೆ. ಕಾರ್ಟೂನ್‌ಗಳು ಜನರಿಗೆ ಸಂದೇಶ ಅರಿತುಕೊಳ್ಳಲು ಸರಳ ಮಾರ್ಗ. ವಿಶೇಷವಾಗಿ ಜನಸಾಮಾನ್ಯರಿಗೆ ಇದು ಬೇಗ ಮುಟ್ಟತ್ತದೆ ಎನ್ನುವ ಇವರು, ಕಾರ್ಟೂನ್ ರಚನೆಯ ಕುರಿತು ಹಲವಾರು ಪ್ರಾತ್ಯಕ್ಷಿಕೆ ಹಾಗೂ ವ್ಯವಸ್ಥೆ ವ್ಯಂಗ್ಯಚಿತ್ರ ಪ್ರದರ್ಶನ ನೀಡಿದ್ದಾರೆ. 2018 ರ ಲೋಕಸಭಾ ಚುನಾವಣೆ ಸಮಯದಲ್ಲಿ ಶಿರಸಿಯ ಉಪವಿಭಾಗಾಧಿಕಾರಿಗಳ ಕೋರಿಕೆಯಂತೆ ಮತದಾನದ ಜಾಗೃತಿಗಾಗಿ ಹಲವಾರು ಕಾರ್ಟೂನ್‌ಗಳನ್ನು ರಚಿಸಿ ಗಮನ ಸೆಳೆದಿದ್ದರು. ಮುಂಬೈ ಕನ್ನಡ ಸಂಘದ ಪ್ರಶಸ್ತಿ, ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸೇರಿ ರಾಜ್ಯಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವ ಇವರು, ಎಲ್ಲಾ ಪ್ರಶಸ್ತಿಗಳಿಗಿಂತ ಓದುಗರ ಅಭಿಮಾನವೇ ದೊಡ್ಡ ಪ್ರಶಸ್ತಿ ಎನಿಸಿದೆ. ಸೊನ್ನೆ ಸುತ್ತಿರಿ ಚಿತ್ರ ಕಲಿಯಿರಿ ಎಂಬ ಮಕ್ಕಳ ಚಿತ್ರ ಕಲಿಕಾ ಪುಸ್ತಕ ಇಲ್ಲಿಯವರೆಗೆ 15 ಸಾವಿರ ಪ್ರತಿ ಮಾರಾಟವಾಗಿದ್ದು, ಮಕ್ಕಳ ಕೈಗೆ ತಲುಪಿದೆ ಎನ್ನುವ ಖುಷಿ ಇದೆ ಎನ್ನುತ್ತಾರೆ.
ತಮ್ಮಣ್ಣ ಬೀಗಾರ
ವೃತ್ತಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು, ಲೇಖಕರು, ವ್ಯಂಗ್ಯಚಿತ್ರಕಾರರು
ಊರು: ಸಿದ್ದಾಪುರ, ಉತ್ತರಕನ್ನಡ
ಶಾಲಾ ದಿನಗಳಲ್ಲಿ ಸುಧಾ, ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರಾಮಮೂರ್ತಿ ನಾಡಿಗ್, ನರೇಂದ್ರ, ಕೆ.ಆರ್.ಸ್ವಾಮಿ, ನೀರ್ನಳ್ಳಿ ಗಣಪತಿ ಮುಂತಾದ ವ್ಯಂಗ್ಯಚಿತ್ರಕಾರರ ಕಲೆಯನ್ನು ನೋಡುತ್ತಾ ವ್ಯಂಗ್ಯಚಿತ್ರಗಳನ್ನು ಬರೆಯುತ್ತಾ ಬಂದವರು ತಮ್ಮಣ್ಣ ಬೀಗಾರ. ನೂರಾರು ಪುಟಗಳ ಬರಹದಲ್ಲಿ ಹೇಳುವಷ್ಟನ್ನು ಒಂದು ವ್ಯಂಗ್ಯ ಚಿತ್ರ ಹೇಳಬಲ್ಲದು ಎನ್ನುತ್ತಾರೆ. ಇದು ನಿಜ ಕೂಡಾ. ಎಲ್ಲ ಸಾಹಿತ್ಯ ಕಲೆಗಳ ಮೂಲ ಉದ್ದೇಶ ಸಾಮಾಜಿಕ ನೆಮ್ಮದಿಯನ್ನು ಉಂಟುಮಾಡುವುದೇ ಆಗಿದೆ. ವ್ಯಂಗ್ಯ ಚಿತ್ರಕಾರರು ಕೂಡಾ ನಿರಂತರವಾಗಿ ಸಾಮಾಜಿ ಸ್ವಾಸ್ಥ್ಯಕ್ಕೆ ಪರಿಶ್ರಮಿಸುತ್ತಾರೆ. ವ್ಯಂಗ್ಯ ಚಿತ್ರಗಳು ಚುಚ್ಚುಮದ್ದಿನಂತೆ, ಸಿಹಿಲೇಪಿತ ಕಹಿ ಗುಳಿಗೆಗಳಂತೆ ಎಂದೆಲ್ಲಾ ಹೇಳುತ್ತಾರೆ. ಮಿಂಚಿನ ಬೆಳಕಿನಂತೆ ಅರೆಕ್ಷಣದಲ್ಲಿ ಅದು ವ್ಯಕ್ತಿಗೆ ಬೆಳಕು ಬೀರುತ್ತದೆ ಎಂದೂ ಹೇಳಬಹುದು ಎನ್ನುವುದು ತಮ್ಮಣ್ಣ ಬೀಗಾರರ ಅಭಿಪ್ರಾಯ. ‘ನಗೆ ಮುಗುಳು’ ಪತ್ರಿಕೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ ಹಾಗೂ ಪತ್ರಿಕಾ ಅಕಾಡೆಮಿ ಸಂಯುಕ್ತವಾಗಿ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. ಅರಣ್ಯ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಹೀಗೆ ಕಾರ್ಟೂನ್ ರಚನೆಯ ಪಯಣದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸತೀಶ ಯಲ್ಲಾಪುರ
ವೃತ್ತಿ: ಚಿತ್ರಕಲಾ ಶಿಕ್ಷಕರು, ಹವ್ಯಾಸಿ ಯಕ್ಷಗಾನ ಕಲಾವಿದರು
ಊರು: ಯಲ್ಲಾಪುರ, ಉತ್ತರಕನ್ನಡ
ಅಣ್ಣನ ಪತ್ರಿಕೆಯ ಅಂಗಡಿಯಲ್ಲಿ ಪತ್ರಿಕೆಗಳನ್ನು ಓದುತ್ತಾ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡವರು ಯಲ್ಲಾಪುರದ ಸತೀಶ ವಿ. ಹೆಗಡೆ. ಆಗ ತಾನೆ ಧಾರವಾಡದಲ್ಲಿ ಚಿತ್ರಕಲಾ ಶಿಕ್ಷಣ ಪಡೆದಿದ್ದ ಇವರು, ವ್ಯಂಗ್ಯಚಿತ್ರ ರಚನೆಗೆ ಅಣ್ಣನಿಂದ ಪ್ರೋತ್ಸಾಹ ದೊರೆತಿದ್ದೇ ತಡ, ಆಗಲೇ ಹೆಸರು ಮಾಡಿದ್ದ ಗುರು ನೀರ್ನಳ್ಳಿ ಗಣಪತಿ ಅವರ ಗರಡಿಯಲ್ಲಿ ಕಾರ್ಟೂನ್ ರಚನೆ ಶುರು ಮಾಡಿಯೇಬಿಟ್ಟರು! 1984 ರಲ್ಲಿ ಮಲ್ಲಿಗೆ ಮಾಸಪತ್ರಿಕೆಯಲ್ಲಿ ಮೊದಲ ವ್ಯಂಗ್ಯಚಿತ್ರ ಪ್ರಕಟಿಸುವುದರ ಮೂಲಕ ವ್ಯಂಗ್ಯಲೋಕಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. 'ಸಾಮಾಜಿಕ ಜಾಗೃತಿಗೆ ಕಲೆ ಯಾವಾಗಲೂ ಸಹಾಯಕ. ನೂರಾರು ಶಬ್ದಗಳಲ್ಲಿ ಹೇಳುವುದನ್ನು ಕೆಲವು ರೇಖೆಗಳ ಮೂಲಕ ಹೇಳಬಹುದು. ಮನುಷ್ಯನನ್ನು ಚಿಂತನೆಗೆ ಒರೆಹಚ್ಚಿ ಆ ಕುರಿತಂತೆ ಕಾರ್ಯಪ್ರವೃತ್ತನಾಗಲು ಪ್ರೇರೇಪಣೆ ನೀಡಲು ಸಾಧ್ಯ. ಆಗಾಗ ಘಟಿಸುವ ಸಾಮಾಜಿಕ ತಲ್ಲಣಗಳ ಬಗ್ಗೆ ಯಾವತ್ತೂ ವ್ಯಂಗ್ಯಚಿತ್ರಕಾರರು ಬೆಳಕು ಚೆಲ್ಲುತ್ತಲೇ ಬಂದಿದ್ದಾರೆ' ಎನ್ನುತ್ತಾರೆ ಸತೀಶ. ಯಾವಾಗಲೂ ಒಂದು ವ್ಯವಸ್ಥೆಯನ್ನು ವಾರೆನೋಟದಲ್ಲಿ ನೋಡುವ, ನೆಗೆಟಿವ್ ಆಗಿ ಚಿತ್ರಿಸುವ ಕ್ರಮವೇ ಹೆಚ್ಚು. ಆದರೆ ಜಾಗೃತಿ ಮೂಡಿಸಬೇಕಾದರೆ ಧನಾತ್ಮಕ ಆಲೋಚನೆಗಳನ್ನು ಕೂಡ ಮಾಡಬೇಕಾಗುತ್ತದೆ ಎನ್ನುವ ಇವರು ಶಿವಮೊಗ್ಗ ಅರಣ್ಯ ವಿಭಾಗದಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ. “ಮೇಘಯಾನ” ಕಥಾ ಸರಣಿಗೆ ಕೇಂದ್ರ ಅರಣ್ಯ ಮಂತ್ರಾಲಯದಿಂದ ದ್ವಿತೀಯ ಬಹುಮಾನ. ವ್ಯಂಗ್ಯಭಾವಚಿತ್ರ ರಚನೆ ಸ್ಫರ್ಧೆಯಲ್ಲಿ ಹಿಂದುಸ್ಥಾನ್ ಟೈಮ್ಸನವರ ಪ್ರೋತ್ಸಾಹಕ ಬಹುಮಾನ ಹೀಗೆ ಹಲವಾರು ಬಹುಮಾನಗಳನ್ನೂ ಪಡೆದಿದ್ದಾರೆ. ವ್ಯಂಗ್ಯಚಿತ್ರ ರಚನೆಯಷ್ಟೇ ಅಲ್ಲದೇ ಯಕ್ಷಗಾನ ರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ.
ಎನ್.ಆರ್. ಹೆಗಡೆ ಬೊಮ್ನಳ್ಳಿ
ವೃತ್ತಿ: ಕೃಷಿಕ, ವ್ಯಂಗ್ಯಚಿತ್ರಕಾರ
ಊರು: ಬೊಮ್ನಳ್ಳಿ, ಶಿರಸಿ ತಾಲೂಕು
ಪತ್ರಿಕೆಗಳನ್ನು, ಪ್ರಚಲಿತ ವಿದ್ಯಮಾನಗಳನ್ನು ಓದುವುದರ ಮೂಲಕ ವ್ಯಂಗ್ಯಚಿತ್ರದ ಬಗ್ಗೆ ಆಸಕ್ತಿ ಹುಟ್ಟಿತು ಎಂದು ಮಾತು ಪ್ರಾರಂಭಿಸುತ್ತಾರೆ ಬೊಮ್ನಳ್ಳಿಯ ಎನ್.ಆರ್. ಹೆಗಡೆ. 2001 ರಲ್ಲಿ ಮೊದಲ ವ್ಯಂಗ್ಯಚಿತ್ರ ಪ್ರಕಟಿಸಿದ ಇವರು ಈವರೆಗೆ ಸಾವಿರಾರು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ನೇರವಾಗಿ ಅಥವಾ ಗಂಭೀರವಾಗಿ ಹೇಳುವುದಕ್ಕಿಂತ ವ್ಯಂಗ್ಯಚಿತ್ರದ ಮೂಲಕ ಹೇಳಿದರೆ ಥಟ್ ಅಂತ ಗಮನ ಸೆಳೆಯಬಹುದು. ಜಾಗೃತಿ ಮೂಡಿಸುವಲ್ಲಿ ಕರೋನಾ ವಿಷಯವೇ ಬೇಕು ಎಂದೇನೂ ಇಲ್ಲ. ಸರಿಯಾಗಿ ಗಮನಿಸುತ್ತಿದ್ದಲ್ಲಿ ವ್ಯಂಗ್ಯಚಿತ್ರಕಾರನಿಗೆ ಎಲ್ಲವೂ ವಿಷಯಗಳೇ. ಉದಾಹರಣೆಗೆ ಮಳೆ, ಬಿಸಿಲು, ಕೃಷಿ, ರಾಜಕೀಯ, ಗಲಭೆ, ಶಿಕ್ಷಣ, ವಿಜ್ಞಾನ, ಇತ್ಯಾದಿ ಎನ್ನುವ ಇವರು
ಯಾರ ಮನಸ್ಸಿಗೂ ನೋವಾಗದಂತೆ ಚಿತ್ರ ರಚಿಸಿದರೆ ಎಲ್ಲ ವಿಷಯಗಳೂ ನಮಗೆ ವರ ಎಂದೇ ಪರಿಗಣಿಸಬಹುದು ಎನ್ನುತ್ತಾರೆ. ಕನ್ನಡದ ಕೆಲವು ಪತ್ರಿಕೆಗಳಿಂದ ಪ್ರಶಸ್ತಿಗಳು ಬಂದಿವೆ. ಹಳ್ಳಿಯಲ್ಲಿರುವುದರಿಂದ ಅನೇಕ ಸ್ಪರ್ಧೆಗಳಿಗೆ ಭಾಗವಹಿಸುವ ಅವಕಾಶಗಳೇ ನಮಗೆ ಸಿಕ್ಕಿರುವದಿಲ್ಲಾ. ಆದರೂ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಂಡಲ್ಲಿ ಅದೇ ಖುಷಿಯಲ್ಲಿ ತೃಪ್ತನಾಗಿದ್ದೇನೆ ಎನ್ನುವುದು ಎನ್.ಆರ್. ಹೆಗಡೆಯವರ ಅಂಬೋಣ.
ಆದರ್ಶ ಪೈ
ವೃತ್ತಿ: ಮೆಕ್ಯಾನಿಕಲ್ ಎಂಜಿನಿಯರ್
ಊರು: ಶಿರಸಿ (ಉ.ಕ.)
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಆದರ್ಶ ಪೈ, ಕಛೇರಿಯ ಕೆಲಸದ ಬಳಿಕ ಕುಂಚ ಹಿಡಿದರೆ ಅಷ್ಟೇ ಸಲೀಸಾಗಿ ಕಾರ್ಟೂನ್ ಕೂಡ ರಚಿಸಬಲ್ಲರು! ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಆದರ್ಶ ಅವರಿಗೆ ಜಿ.ಎಂ.ಬೊಮ್ನಳ್ಳಿ, ಎನ್.ಆರ್.ಬೊಮ್ನಳ್ಳಿ, ನೀರ್ನಳ್ಳಿ ಗಣಪತಿ, ಗಣೇಶ ಕಾಳಿಸರ ಮುಂತಾದವರ ಕಾರ್ಟೂನ್‌ಗಳು ತಾನೂ ಕಾರ್ಟೂನ್‌ಗಳನ್ನು ರಚಿಸಬೇಕೆಂಬ ಆಸೆಯನ್ನು ಮತ್ತಷ್ಟು ಹೆಚ್ಚಿಸಿತು. 1996 ರಲ್ಲಿ ರಾಯಚೂರು ವಾಣಿಯಲ್ಲಿ ಆದರ್ಶ ಅವರ ಮೊದಲ ಕಾರ್ಟೂನ್ ಪ್ರಕಟಗೊಂಡಿತು. ದೇಶದಲ್ಲಿ ನಡೆಯುವ ಸಾಮಾಜಿಕ ತಲ್ಲಣಗಳ ವಿಷಯದಲ್ಲಿ ಋಣಾತ್ಮಕ ಹಾಗೂ ಧನಾತ್ಮಕ ವಿಷಯಗಳ ಕುರಿತು ವಿಷಯವನ್ನು ಸಂಗ್ರಹಿಸಿ ಅದಕ್ಕೆ ವ್ಯಂಗ್ಯರೂಪವನ್ನು ನೀಡಿ ಜನರನ್ನು ನಗಿಸುವ ಕಾರ್ಯವನ್ನು ಕಾರ್ಟೂನ್‌ಗಳು ಮಾಡುತ್ತವೆ ಎನ್ನುವ ಇವರು ಹಲವಾರು ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಜೈ ಜಗತ್ ಅಂತಾರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಯಲ್ಲಿ 2 ಬಾರಿ ಭಾಗವಹಿಸಿ ಪ್ರಮಾಣ ಪತ್ರ ಪಡೆದಿದ್ದಾರೆ.
ರಂಗನಾಥ ಸಿದ್ದಾಪುರ
ವೃತ್ತಿ: ಕಲಾವಿದ, ವ್ಯಂಗ್ಯಚಿತ್ರಕಾರ
ಊರು: ಸಿದ್ದಾಪುರ
ರಂಗನಾಥ ಸಿದ್ದಾಪುರ ಕಾವ್ಯನಾಮದಿಂದ ಕಾರ್ಟೂನ್‌ಗಳನ್ನು ರಚಿಸುವ ರಂಗನಾಥ ವಿ ಶೇಟ್ ಜನಿಸಿದ್ದು ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ. ಈಗ ಸಿದ್ದಾಪುರದಲ್ಲಿ ನೆಲೆಸಿರುವ ಇವರು ರಂಗನಾಥ ಆರ್ಟ್ಸ್ ಎಂಬ ಉದ್ಯಮದ ಜೊತೆಗೆ ಕಾರ್ಟೂನ್‌ಗಳನ್ನು ರಚಿಸುತ್ತಿದ್ದಾರೆ. ಹೈಸ್ಕೂಲ್ ದಿನಗಳಲ್ಲಿ ಮನೆಮನೆಗೆ ಪತ್ರಿಕೆಗಳನ್ನು ಹಂಚುತ್ತಾ ಅದರಲ್ಲಿ ಬರುತ್ತಿದ್ದ ಆರ್.ಕೆ.ಲಕ್ಷ್ಮಣ್, ಬಿ.ವಿ.ರಾಮಮೂರ್ತಿ, ನರೇಂದ್ರ ಮುಂತಾದವರ ಕಾರ್ಟೂನ್‌ಗಳನ್ನು ನೋಡುತ್ತಾ ವ್ಯಂಗ್ಯಲೋಕದ ಪಯಣ ಆರಂಭಿಸಿದರು. ಸಾಮಾಜಿಕ ತಲ್ಲಣ ಮತ್ತು ಭಯ ಮೂಡಿಸುವ ಸಂದರ್ಭಗಳಲ್ಲಿ ಕಾರ್ಟೂನ್‌ಗಳು ಹಾಸ್ಯ ಪ್ರಜ್ಞೆಯಿಂದ ನಗು ಮತ್ತು ಜಾಗೃತಿ ಮೂಡಿಸುತ್ತದೆ ಎನ್ನುತ್ತಾರೆ ರಂಗನಾಥ ಶೇಟ್. ರಾಜ್ಯದ ಹಲವಾರು ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿದ್ದು, ಮೂರು ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
ಸತೀಶ ಎಲೇಸರ
ವೃತ್ತಿ: ಶಿರಸಿಯ ಶ್ರೀಮಹಾಗಣಪತಿ ಶ್ರೀಶಂಕರ ದೇವಾಲಯದ ವ್ಯವಸ್ಥಾಪಕ
ಊರು: ಸಿದ್ದಾಪುರ ತಾಲೂಕಿನ ಎಲೇಸರ
ಖ್ಯಾತ ವ್ಯಂಗ್ಯಚಿತ್ರಕಾರ ನೀರ್ನಳ್ಳಿ ಗಣಪತಿ ಅವರ ಗರಡಿಯಲ್ಲಿ ಪಳಗಿದ ಹಲವಾರು ಕಲಾವಿದರಲ್ಲೊಬ್ಬರು ಸತೀಶ ಎಲೇಸರ. ಕಳೆದ 30 ವರ್ಷಗಳಿಂದ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿರುವ ಇವರ ವ್ಯಂಗ್ಯಚಿತ್ರಗಳು ಸುಧಾ, ಮಯೂರ ಸೇರಿದಂತೆ ಹಲವಾರು ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ತೀರಾ ಗಂಭೀರವಾಗಿ ವ್ಯಂಗ್ಯಚಿತ್ರಗಳನ್ನು ರಚಿಸಿಲ್ಲ.ಉಬ್ಬು ಚಿತ್ರಗಳನ್ನು ಮಾಡುವ ಅವಕಾಶಗಳು ಹೆಚ್ಚಾಗಿ ಸಿಕ್ಕ ಕಾರಣ ವ್ಯಂಗ್ಯಚಿತ್ರಗಳನ್ನು ಅಷ್ಟಾಗಿ ರಚಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸತೀಶ ಎಲೇಸರ.
ಬಾಲು ಪಟಗಾರ
ವೃತ್ತಿ: ಪ್ರಾಥಮಿಕ ಶಾಲಾ ಶಿಕ್ಷಕ
ಊರು: ಬರ್ಗಿ, ಕುಮಟಾ ತಾಲೂಕು
ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕರಾಗಿರುವ ಬಾಲು ಪಟಗಾರ, ಪ್ರವೃತ್ತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಪ್ರಮುಖ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಶಾಲಾ-ಕಾಲೇಜು ದಿನಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆಗಳನ್ನು ಓದುತ್ತಿದ್ದರೂ ಬಾಲು ಪಟಗಾರರು ಮೊದಲು ನೋಡುತ್ತಿದ್ದಿದ್ದು ಕಾರ್ಟೂನ್‌ಗಳನ್ನು! ಹೀಗೆ ಕಾರ್ಟೂನ್‌ಗಳನ್ನು ನೋಡುತ್ತಾ 2001 ರಲ್ಲಿ ಮೊದಲ ವ್ಯಂಗ್ಯಚಿತ್ರ ಬರೆದು ಕರ್ಮವೀರದಲ್ಲಿ ಪ್ರಕಟಿಸಿದರು! ಅಲ್ಲಿಂದ ಇಲ್ಲಿಯ ತನಕ ಸಾವಿರಾರು ಕಾರ್ಟೂನ್‌ಗಳನ್ನು ರಚಿಸಿದ್ದಾರೆ. ರಾಜ್ಯಮಟ್ಟದ ಹಲವಾರು ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಇವರು ಕತೆ, ಕವನ, ಚುಟುಕುಗಳನ್ನು ಬರೆಯುವುದರಲ್ಲೂ ನಿಸ್ಸೀಮರು. ಕರೋನಾ ವೈರಸ್ ಕುರಿತು ಹಲವಾರು ವ್ಯಂಗ್ಯಚಿತ್ರ ರಚಿಸಿ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ.
ಗಣೇಶ ಕಾಳೀಸರ
ವೃತ್ತಿ: ಕೃಷಿಕ, ವ್ಯಂಗ್ಯಚಿತ್ರಕಾರ
ಊರು: ಕಾಳೀಸರ, ಶಿರಸಿ
ವೃತ್ತಿಯಲ್ಲಿ ಕೃಷಿಕರಾಗಿರುವ ಕಾಳೀಸರದ ಗಣೇಶ ಅವರು ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಪತ್ರಿಕೆಗಳಲ್ಲಿನ ವ್ಯಂಗ್ಯಚಿತ್ರಗಳನ್ನು ಗಮನಿಸುತ್ತ ವ್ಯಂಗ್ಯಚಿತ್ರ ಕೃಷಿ ಆರಂಭಿಸಿದರು. 'ಸಾಮಾಜಿಕ ತಲ್ಲಣಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವ್ಯಂಗ್ಯಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಗಂಭೀರ ವಿಷಯಗಳನ್ನೂ ಇಲ್ಲಿ ನವಿರು ಹಾಸ್ಯದ ಮೂಲಕ ಹೇಳುವುದರಿಂದ ಅದು ಸುಲಭವಾಗಿ ಜನರನ್ನು ತಲುಪುತ್ತವೆ' ಎನ್ನುವ ಇವರು ಪ್ರಶಸ್ತಿ ಪುರಸ್ಕಾರದ ವಿಚಾರಕ್ಕೆ ಬಂದರೆ ಯಾವುದೇ ಪ್ರಶಸ್ತಿಗಳು ಅರಸಿ ಬಂದಿಲ್ಲ. ಪ್ರಶಸ್ತಿಗಳು ಅರಸಿ ಬರುವಷ್ಟು ನನ್ನ ವ್ಯಂಗ್ಯಚಿತ್ರಗಳು ಪಕ್ವವಾಗಿಲ್ಲ ಎನ್ನಬಹುದೇನೋ! ಎಂದು ನೇರವಾಗಿ ಹೇಳುತ್ತಾರೆ.
ರಘುಪತಿ ಶೃಂಗೇರಿ
ವೃತ್ತಿ:
ಊರು: ಶೃಂಗೇರಿ, ಚಿಕ್ಕಮಗಳೂರು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ ಮೂಲತಃ ಕಂಪನಿಯಲ್ಲಿ ಉದ್ಯೋಗಿ. ಹೆಸರಾಂತ ಕಾರ್ಟೂನಿಸ್ಟ್ ಆಗಿದ್ದ ಡಾ.ಸತೀಶ ಶೃಂಗೇರಿ ಅವರ ಸಹೋದರರಾಗಿರುವ ಇವರಿಗೆ ವ್ಯಂಗ್ಯ ಲೋಕದಲ್ಲಿ ಪಯಣಿಸಲು ಅಣ್ಣನೇ ಸ್ಪೂರ್ತಿ! ರಘುಪತಿ ಅವರ ತಂದೆ, ತಾಯಿ ಹಾಗೂ ಅಕ್ಕ ಕೂಡ ಕಲೆಯಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮ ಸಹಜವಾಗಿ ಕಲೆ ಇವರನ್ನೂ ಆಕರ್ಷಿಸಿತು. ಅಣ್ಣನ ವ್ಯಂಗ್ಯಚಿತ್ರಗಳಿಂದ ಪ್ರೇರಿತರಾಗಿ 1992 ರಿಂದ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದಾರೆ. 'ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ನಮಗೆ ಮೊದಲು ನೆನಪಾಗುವುದು ವ್ಯಂಗ್ಯಚಿತ್ರಗಳು. ಜಾಗೃತಿ ಮೂಡಿಸಲು ಹಲವಾರು ಪುಟಗಳ ಲೇಖನಗಳನ್ನು ಬರೆದರೆ ಓದುವವರು ವಿರಳಾತಿ ವಿರಳ. ಆದರೆ ಒಂದು ವ್ಯಂಗ್ಯಚಿತ್ರ ಎಂಥವರಿಗೂ ಅರ್ಥವಾಗುವಂತೆ, ಹೃದಯಕ್ಕೆ ಆಪ್ತವೆನಿಸುತ್ತವೆ. ಜಾಗೃತಿ ಮೂಡಿಸುತ್ತವೆ. ಈ ಲಾಕ್‌ಡೌನ್ ಕಾಲದಲ್ಲಿ ನಾನು ತುಂಬಾ ಬಿಸಿಯಾಗಿದ್ದೇನೆ. ಆಫೀಸ್ ಕೆಲಸಗಳ ಮಧ್ಯೆ ಕರೋನಾ ಬಗೆಗಿನ ಜಾಗೃತಿ ಮೂಡಿಸುವ ಹಲವಾರು ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದೇನೆ. ಹಲವಾರು ಪತ್ರಿಕೆಗಳಿಗೆ ಕಥಾ ಚಿತ್ರಗಳು, ವ್ಯಂಗ್ಯಭಾವಚಿತ್ರಗಳು, ಪೋರ್ಟ್ರೇಟ್ಸ್ ಹಾಗೂ ಪೇಂಟಿಂಗ್ಸ್‌ಗಳನ್ನೂ ಮಾಡುತ್ತಿದ್ದೇನೆ ಎನ್ನುತ್ತಾರೆ ರಘುಪತಿ ಶೃಂಗೇರಿ. ಇವರಿಗೆ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ 6 ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ 7 ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ 3 ಬಾರಿ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ನಾಮದೇವ ಕಾಗದಗಾರ
ವೃತ್ತಿ: ಅರೆಕಾಲಿಕ ಶಿಕ್ಷಕ, ವನ್ಯಜೀವಿ ಛಾಯಾಗ್ರಾಹಕ, ಬರಹಗಾರ
ಊರು: ರಾಣೆಬೆನ್ನೂರು, ಹಾವೇರಿ
ವೃತ್ತಿ: ಅರೆಕಾಲಿಕ ಶಿಕ್ಷಕ, ವನ್ಯಜೀವಿ ಛಾಯಾಗ್ರಾಹಕ, ಬರಹಗಾರ
ಊರು: ರಾಣೆಬೆನ್ನೂರು, ಹಾವೇರಿ
ಅಂತಿಮ ವರ್ಷದ ಪದವಿ ಓದುತ್ತಿರುವ ಸಂದರ್ಭದಲ್ಲಿ ಅಂದರೆ 2003 ರಿಂದ ವ್ಯಂಗ್ಯ ಪಯಣ ಪ್ರಾರಂಭಿಸಿದವರು ನಾಮದೇವ ಕಾಗದಗಾರ. ಕರ್ಮವೀರ ಪತ್ರಿಕೆಯ ಮೂಲಕ ಚಿತ್ರಯಾನ ಪ್ರಾರಂಭಿಸಿದ ಇವರು ಕನ್ನಡ, ಇಂಗ್ಲಿಷ್, ಮರಾಠಿ ಮತ್ತು ತೆಲುಗು ಪತ್ರಿಕೆಗಳಲ್ಲಿ ಈವರೆಗೆ 10 ಸಾವಿರಕ್ಕೂ ಅಧಿಕ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದಾರೆ. 80 ಸಾವಿರಕ್ಕೂ ಹೆಚ್ಚು ರೇಖಾಚಿತ್ರಗಳನ್ನು ರಚಿಸಿದ್ದಾರೆ. ಇನ್ನೊಂದು ಗಮನಾರ್ಹ ವಿಷಯವೆಂದರೆ ಈಗಾಗಲೇ ಕರೋನಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 14 ದಿನಗಳಲ್ಲಿ 300 ಕ್ಕೂ ಅಧಿಕ ರೇಖಾಚಿತ್ರಗಳನ್ನು ರಚಿಸಿದ್ದಾರೆ. ಅಲ್ಲದೇ ವನ್ಯಜೀವಿ ಛಾಯಾಗ್ರಹಣದ ಅನುಭವದ ಕುರಿತು ಸುಮಾರು 30 ಲೇಖನಗಳನ್ನು ಒಳಗೊಂಡ 'ಕೆಂಪು ತುರಾಯಿ' ಎಂಬ ಪುಸ್ತಕವನ್ನೂ ಬರೆಯುತ್ತಿದ್ದಾರೆ. 'ವ್ಯಂಗ್ಯಚಿತ್ರ ಕೆಲವರಿಗೆ ನಗು ತಂದರೆ ಹಲವರ ಹೊಟ್ಟೆಯಲ್ಲಿ ಚುರುಕು ಬತ್ತಿಯನ್ನು ಹೊತ್ತಿಸುತ್ತದೆ. ಮತ್ತೂ ಕೆಲವರನ್ನು ಚಿಂತನೆಗೆ ಗುರಿ ಮಾಡುತ್ತದೆ. ಹೀಗೆ ಆನೆಯನ್ನು ಮುಟ್ಟಿದ ಅನುಭವ ಕೆಲವರಿಗಾಗುತ್ತದೆ. ಅಷ್ಟು ಪ್ರಭಾವಶಾಲಿಯಾಗಿರುತ್ತದೆ ವ್ಯಂಗ್ಯಚಿತ್ರಗಳು. ಚಿತ್ರಗಾರರಲ್ಲಿ ಇಲ್ಲದ್ದು ವ್ಯಂಗ್ಯಚಿತ್ರಕಾರರಲ್ಲಿ ಇರುತ್ತದೆ. ಇರಲೇ ಬೇಕು ಕೂಡಾ. ಕಾರ್ಟೂನಿಸ್ಟ್‌ಗಳಿಗೆ ಚಿತ್ರ ಬರೆಯಲು ಬಂದರಷ್ಟೇ ಸಾಲದು. ಸಾಹಿತ್ಯದ ಅಧ್ಯಯನ, ವಿಷಯ ವಿಶ್ಲೇಷಣಾ ಗುಣ, ಎಲ್ಲರನ್ನೂ ಮರೆಮಾಚಿಸಿ ಗೊಳ್ಳನೆ ನಗಿಸುವ ಗುಣ ಇದ್ದರಷ್ಟೇ ಈ ರಂಗ ಒಲಿಯುವುದು. ಓರೆಕೋರೆಗಳನ್ನು ಬಳಸಿ ಕಡಿಮೆ ಗೆರೆಗಳಲ್ಲಿ ವ್ಯಕ್ತಿಯ ಭಾವಚಿತ್ರವನ್ನು ರಚಿಸುವ ಜಾಣ್ಮೆ ಇಲ್ಲದಿದ್ದರೆ ರಾಜಕೀಯ ವ್ಯಂಗ್ಯಚಿತ್ರಕಾರರಾಗಲು ಸುತಾರಾಂ ಸಾಧ್ಯವಿಲ್ಲ ಎನ್ನುತ್ತಾರೆ ನಾಮದೇವ ಕಾಗದಗಾರ. 2018- 19 ನೇ ಸಾಲಿನಲ್ಲಿ ರಚಿಸಿದ್ದ ಸಾಮಾಜಿಕ ಜಾಗೃತಿ ಬಿಂಬಿಸುವ ಸುಮಾರು 22 ಅಡಿ ಉದ್ದ, 2 ಅಡಿ ಅಗಲದ ವ್ಯಂಗ್ಯಚಿತ್ರ ಕಲಾಕೃತಿಗೆ ಇನ್‌ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆಗೆ ಸೇರಿದೆ. ದಿ ಬೆಸ್ಟ್ ಆರ್ಟಿಸ್ಟ್, ಚಿತ್ರಕಲಾ ಗುರುದೇವ ಪ್ರಶಸ್ತಿ, ರಾಷ್ಟ್ರೀಯ ಕಲಾಭೂಷಣ ಪ್ರಶಸ್ತಿ, ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನೂ ನಾಮದೇವ ಅವರು ಪಡೆದಿದ್ದಾರೆ.
ನಂಜುಂಡ ಸ್ವಾಮಿ ವೈ.ಎಸ್.
ವೃತ್ತಿ: ಕಲಾವಿದರು
ಊರು: ಶಿವಮೊಗ್ಗ
ಕಲಾವಿದನಾಗಿದ್ದ ನನಗೆ ವ್ಯಂಗ್ಯಚಿತ್ರ ಬರೆಯುವಂತೆ ಪ್ರೇರಣೆ ನೀಡಿದ್ದು ಹಿರಿಯ ವ್ಯಂಗ್ಯಚಿತ್ರಕಾರ ಮೇಗರವಳ್ಳಿ ಸುಬ್ರಹ್ಮಣ್ಯ ಮತ್ತು ಹೆಚ್ಚಿನ ಪ್ರೋತ್ಸಾಹ ನೀಡಿದ್ದು ತರಂಗ ಪತ್ರಿಕೆಯ ವ್ಯಂಗ್ಯಚಿತ್ರಕಾರ ಜೇಮ್ಸ್‌ವಾಜ್‌ರವರು ಎಂದು ವ್ಯಂಗ್ಯಲೋಕದ ಬದುಕಿಗೆ ಪಾದಾರ್ಪಣೆ ಮಾಡಿದ ಕುರಿತು ಮಾಹಿತಿ ಬಿಚ್ಚಿಡುತ್ತಾರೆ ವ್ಯಂಗ್ಯಚಿತ್ರಕಾರ ನಂಜುಂಡ ಸ್ವಾಮಿ ವೈ.ಎಸ್. ಎಂತಹದೇ ವಿಷಯವನ್ನೂ ಬಹಳ ಸುಲಭವಾಗಿ ಅರ್ಥ ಮಾಡಿಸುವ ಶಕ್ತಿ ವ್ಯಂಗ್ಯಚಿತ್ರಕ್ಕೆ ಇರುವುದರಿಂದ ಇದರ ಪಾತ್ರ ಬಹುಮುಖ್ಯವಾಗಿದೆ. ಅತ್ಯಂತ ಜವಾಬ್ದಾರಿಯಿಂದ ಇದನ್ನು ನಿರ್ವಹಿಸಬೇಕು ಎನ್ನುವ ಇವರು ಸತೀಶ ಆಚಾರ್ಯರ ಕಾರ್ಟೂನ್ ಹಬ್ಬ, ರಘುಪತಿ ಶೃಂಗೇರಿ ಅವರ ವ್ಯಂಗ್ಯತರಂಗ ಕ್ಯಾರಿಕೇಚರ್ ಸ್ಪರ್ಧೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಆನ್‌ಲೈನ್ ಕಾರ್ಟೂನ್ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಶರದ್ ಕುಲಕರ್ಣಿ
ವೃತ್ತಿ: ವ್ಯಂಗ್ಯಚಿತ್ರಕಾರ
ಊರು: ಬೀದರ್
ಬೀದರ್ ಜಿಲ್ಲೆಯ ಮೊದಲ ವ್ಯಂಗ್ಯಚಿತ್ರಕಾರ ಎಂಬ ಹೆಗ್ಗಳಿಕೆ ಶರದ್ ಕುಲಕರ್ಣಿ ಅವರದ್ದು. ಸಾಧಿಸುವ ಛಲವಿದ್ದರೆ ಅಂಗವೈಕಲ್ಯವೂ ಅಡ್ಡಿಯಾಗುವುದಿಲ್ಲ ಎಂಬುದನ್ನು ನಿರೂಪಿಸಿದವರು ಶರದ್. ನನ್ನ ತಂದೆ ಮುರಳೀಧರರಾವ್ ಕುಲಕರ್ಣಿ ನಿವೃತ್ತ ಉಪನ್ಯಾಸಕ ಮತ್ತು ಸಾಹಿತಿ. ನಾನು ಸಣ್ಣವನಿದ್ದಾಗ ನಮ್ಮ ಮನೆಗೆ ಅನೇಕ ನಿಯತಕಾಲಿಕೆಗಳು ಬರುತ್ತಿದ್ದವು. ಮನೆಯಲ್ಲಿನ ಸಾಹಿತ್ಯಿಕ ವಾತಾವರಣವೇ ನನಗೆ ಕಾರ್ಟೂನಿಸ್ಟ್ ಆಗಲು ಸ್ಪೂರ್ತಿ ಎನ್ನುತ್ತಾರೆ ಶರದ್. ಒಂದು ವರ್ಷದ ಬಾಲಕನಿದ್ದಾಗಲೇ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳು ನಿಷ್ಕ್ರಿಯಗೊಂಡ ಪರಿಣಾಮ ವ್ಹೀಲ್ ಚೇರ್ ಬಳಸಿ ಇಲ್ಲವೇ ಕೈಗಳನ್ನು ನೆಲಕ್ಕೂರಿ ಅಂಬೆಗಾಲಿಟ್ಟು ನಡೆಯಬೇಕು. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ದೈಹಿಕ ಅಂಗವಿಕಲತೆಗಿಂತ ಮಾನಸಿಕ ಅಂಗವಿಕಲತೆ ಅಪಾಯಕಾರಿ ಎಂದು ಅರಿತು ಕಾರ್ಟೂನ್ ಜಗತ್ತಿಗೆ ಪಾದಾರ್ಪಣೆ ಮಾಡಿ ಖ್ಯಾತರಾಗಿದ್ದಾರೆ. ಸಾವಿರ ಪದಗಳು ಹೇಳುವುದನ್ನು ಒಂದು ಚಿತ್ರ ಹೇಳಬಲ್ಲದು. ಕಹಿ ಗುಳಿಗೆಗೆ ಸಿಹಿಯನ್ನು ಲೇಪಿಸಿ ಓದುಗರಿಗೆ ನೀಡುವುದು ವ್ಯಂಗ್ಯಚಿತ್ರಕಾರನ ಕೆಲಸ. ಸಾಮಾಜಿಕ ತಲ್ಲಣಗಳ ಬಗ್ಗೆ ಜನಜಾಗೃತಿ ಮೂಡಿಸಲು ವ್ಯಂಗ್ಯಚಿತ್ರಕಾರ ತನ್ನ ಕಾರ್ಟೂನ್‌ಗಳ ಮೂಲಕ ಸಾಕಷ್ಟು ಕೆಲಸ ಮಾಡಬಲ್ಲ ಎನ್ನುವ ಇವರು ಸ್ಥಳೀಯ ಸಂಘ-ಸಂಸ್ಥೆಗಳಿಂದ ಅನೇಕ ಸನ್ಮಾನಗಳನ್ನು ಪಡೆದಿದ್ದಾರೆ. ವಿಶೇಷವೆಂದರೆ ಇಂಡಿಯನ್ ಕಾರ್ಟೂನ್ ಗ್ಯಾಲರಿಯಿಂದ ಇವರ ವ್ಯಂಗ್ಯಚಿತ್ರಗಳು ದಿಲ್ಲಿ, ಛತ್ತೀಸಘಡ್ ಇತರೆಡೆ ಪ್ರದರ್ಶನಗೊಂಡಿದೆ.
ಶರಣು ಚಟ್ಟಿ
ವೃತ್ತಿ: ಶಿಕ್ಷಕರು, ಸಾಹಿತಿ, ವ್ಯಂಗ್ಯಚಿತ್ರಕಾರ
ಊರು: ಗೋಲಗೇರಿ, ಸಿಂದಗಿ ತಾಲೂಕು, ವಿಜಯಪುರ
ವೃತ್ತಿಯಲ್ಲಿ ಶಿಕ್ಷಕರಾಗಿರುವ ಶರಣು ಚಟ್ಟಿಯವರು ಪ್ರವೃತ್ತಿಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರರು. 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ ಚಟ್ಟಿಯವರು ಗಾತ್ರದಲ್ಲಿ ಚಿಕ್ಕವರಾದರೂ ಅವರ ಕಾರ್ಟೂನಿನ ಪಂಚ್‌ಗಳ ಹರವು ಮಾತ್ರ ದೊಡ್ಡದು! ತಂದೆ ಗೊಲ್ಲಾಳಪ್ಪ ಚಟ್ಟಿಯವರೂ ಮೂಲತಃ ಕಲಾವಿದರಾಗಿದ್ದ ಕಾರಣ ಇವರಿಗೂ ಕೂಡ ಕಲೆ ದೈವದತ್ತವಾಗಿ ಒಲಿಯಿತು. ಪತ್ರಿಕೆಗಳಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳನ್ನು ನಕಲಿಸುತ್ತಲೇ ನನ್ನಲ್ಲೂ ಒಬ್ಬ ಕಲಾವಿದ ಅವತರಿಸಿದ್ದ ಎನ್ನುತ್ತಾರೆ ಶರಣು. ಆರ್.ಕೆ.ಲಕ್ಷ್ಮಣ್,ಮಾರಿಯೋ ಮಿರಾಂಡ, ಪ್ರಕಾಶ್ ಶೆಟ್ಟಿ, ಪಿ.ಮಹಮ್ಮದ್, ಜೇಮ್ಸ್‌ವಾಜ್, ಗೊರವರ ಯಲ್ಲಪ್ಪ ಸೇರಿದಂತೆ ಅನೇಕ ಖ್ಯಾತನಾಮರಿಂದ ಸಾಕಷ್ಟು ಪ್ರೋತ್ಸಾಹ- ಮಾರ್ಗದರ್ಶನ ದೊರಕಿದವು. ಹೀಗಾಗಿ ನನ್ನಲ್ಲಿ ವ್ಯಂಗ್ಯಚಿತ್ರಕಲೆಯ ಆಸಕ್ತಿ ಹೆಚ್ಚುತ್ತಲೇ ಸಾಗಿತು. ಸಾಮಾಜಿಕ ತವಕ ತಲ್ಲಣಗಳಿಗೆ ವ್ಯಂಗ್ಯಚಿತ್ರಗಳು ಪರಿಹಾರಾತ್ಮಕವಾಗಿಯೇ ಮೂಡಿವೆ. ಸಾಮಾಜಿಕ ವ್ಯವಸ್ಥೆಗೆ ಕನ್ನಡಿಯಂತಿರುವ ವ್ಯಂಗ್ಯಚಿತ್ರಗಳು ಜಾಗೃತಿ ಅಭಿಯಾನಗಳಲ್ಲಿ ವಿಶೇಷ ಪಾತ್ರವಹಿಸಿವೆ. ಇಂತಹ ಜಾಗೃತಿ ಮೂಡಿಸಬೇಕಾದದ್ದು ಓರ್ವ ವ್ಯಂಗ್ಯಚಿತ್ರಕಾರನ ಜವಾಬ್ದಾರಿಯೂ ಹೌದು ಎನ್ನುವ ಇವರಿಗೆ ವ್ಯಂಗ್ಯ ಕೃಷಿಗಾಗಿ ಆರೂಢಶ್ರೀ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ, ಶಿಕ್ಷಕ ವೃತ್ತಿ, ಸಾಹಿತ್ಯ ಕೃಷಿ, ಗಾಯನ ಹವ್ಯಾಸಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ಗೌರವಗಳು ಸಂದಿವೆ.
ವೆಂಕಟ್ ಭಟ್, ಎಡನೀರು
ವೃತ್ತಿ: ಕೇರಳದ ಸರ್ಕಾರಿ ಶಾಲಾ ನಿವೃತ್ತ ಗುಮಾಸ್ತರು
ಊರು: ಎಡನೀರು, ಕಾಸರಗೋಡು, ಕೇರಳ (ಗಡಿನಾಡು ಪ್ರದೇಶ)
ಅದು 1976 ರ ಸಮಯ. ಶಾಲಾ ದಿನಗಳಲ್ಲಿ ಹಾಸ್ಯ, ನಾಟಕಗಳನ್ನು ಮಾಡುತ್ತಿದ್ದ ವೆಂಕಟ್ ಭಟ್ ಅವರು ಶಾಲಾ ದಿನಗಳಲ್ಲೇ ಚಿತ್ರಕಲೆಯನ್ನೂ ಕಲಿತರು. ಅಲ್ಲದೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳನ್ನು ನೋಡುತ್ತಾ ಚಿತ್ರಿಸಲು ಕಲಿತರು. ಇದು ನನ್ನ ಜೀವನದ ಸ್ವಯಂ ಪ್ರೇರಿತ ಕಲೆ ಎನ್ನುವ ವೆಂಕಟ್ ಭಟ್ ಅವರು 1982 ರಲ್ಲಿ ಮಯೂರ ಮಾಸಿಕ ಅಕ್ಟೋಬರ್ ಸಂಚಿಕೆಯಲ್ಲಿ ಇವರ ಪ್ರಥಮ ವ್ಯಂಗ್ಯಚಿತ್ರವನ್ನು ಪ್ರಕಟಿಸಿತು. ಅಂದಿನಿಂದ ಇಂದಿನವರೆಗೂ 8 ಸಾವಿರಕ್ಕೂ ಅಧಿಕ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿವೆ. 'ಜನ ಒಂದೋ ನಗಬೇಕು. ಇಲ್ಲ ಅಳಬೇಕು ಎನ್ನುವುದೇ ನನ್ನ ಅಂಬೋಣ. ವ್ಯಂಗ್ಯಚಿತ್ರಗಳನ್ನು ನೋಡದವರಿಲ್ಲ. ಹೆಚ್ಚಿನವರು ಚಿತ್ರಗಳನ್ನು ನೋಡಿ ಒಂದು ಕ್ಷಣ ಯೋಚಿಸಿ ಚಿಂತನೆಗೆ ಒಳಗಾಗುತ್ತಾರೆ. ಸಾಮಾಜಿಕ ತಲ್ಲಣಗಳ ಕುರಿತಾದ ಚಿತ್ರಗಳು ಬೇಗನೆ ಮನಮುಟ್ಟುತ್ತದೆ. 'ಹೌದಲ್ಲಾ!' ಎಂಬುದು ಪ್ರತಿಯೊಬ್ಬ ಓದುಗನಿಗೂ ಅನಿಸುತ್ತದೆ. ನಿಜ ಸತ್ಯಗಳನ್ನು ತಮ್ಮ ವ್ಯಂಗ್ಯ ನುಡಿಗಳ ಮೂಲಕ ಜನರ ಮನ ಮುಟ್ಟುವ ಕೆಲಸ ವ್ಯಂಗ್ಯಚಿತ್ರಗಳು ಮಾಡುತ್ತವೆ' ಎನ್ನುತ್ತಾರೆ ವೆಂಕಟ್ ಭಟ್ ಎಡನೀರು. 1982 ರಿಂದ ಆರಂಭಗೊಂಡ ವ್ಯಂಗ್ಯಚಿತ್ರ ಕಲೆಗೆ ಹಲವಾರು ಸಂಘ-ಸಂಸ್ಥೆಗಳು, ಪತ್ರಿಕೆಗಳು ಪ್ರಶಸ್ತಿ ನೀಡಿವೆ. ಕೇರಳ ರಾಜ್ಯ ಪಠ್ಯ ಪುಸ್ತಕಗಳಲ್ಲಿ ಇವರ ಚಿತ್ರಗಳು ಪ್ರಕಟವಾಗಿದೆ. ಕಾರ್ಟೂನ್‌ಗಳ ಜೊತೆಗೆ ಹನಿಗವನ, ಹನಿಕಥೆ, ನಾಟಕ, ಹಾಸ್ಯಲೇಖನ, ಪ್ರಬಂಧ ಕೂಡ ಬರೆಯುವ ಇವರು ಖರ್ಜೂರ, ತಿಳಿಸಾರು ಹೀಗೆ ವಿವಿಧ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.
ಗೋಪಿ ಹಿರೇಬೆಟ್ಟು
ವೃತ್ತಿ: ಕಮರ್ಶಿಯಲ್ ಆರ್ಟಿಸ್ಟ್
ಊರು: ಹಿರೇಬೆಟ್ಟು, ಉಡುಪಿ ತಾಲೂಕು
ಬಾಲ್ಯದಲ್ಲಿ ತರಂಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳೇ ಕಾರ್ಟೂನ್ ಜಗತ್ತಿಗೆ ಕಾಲಿಡಲು ಪ್ರೇರಣೆ ಎನ್ನುತ್ತಾರೆ ಗೋಪಿ ಹಿರೇಬೆಟ್ಟು. ಇವರ ಮೂಲ ಹೆಸರು ಗೋಪಾಲಕೃಷ್ಣ ಕಾಮತ್. ಆದರೆ ಕಾರ್ಟೂನ್ ಲೋಕದಲ್ಲಿ ಗೋಪಿ ಹಿರೇಬೆಟ್ಟು ಎಂದೇ ಚಿರಪರಿಚಿತ. 'ವ್ಯಂಗ್ಯಚಿತ್ರಗಳ ಮೂಲಕ ಒಂದಷ್ಟು ಜನಜಾಗೃತಿ ಮೂಡಿಸಬಹುದು. ಆದರೆ ಹೇಳುವಂಥವ ಬದಲಾವಣೆ ಅಸಾಧ್ಯ ಎಂಬ ನೋವಿದೆ ಎನ್ನುತ್ತಾರೆ. ಈವರೆಗೆ ಯಾವುದೇ ಪ್ರಶಸ್ತಿಗಳಿಗೆ ಅರ್ಜಿ ಹಾಕದ ಇವರು ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಅಭ್ಯಾಸವಿಲ್ಲ. ನನ್ನ ವ್ಯಂಗ್ಯಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಅದೇ ಪ್ರಶಸ್ತಿ ಬಂದಂತೆ ಖುಷಿ ನೀಡುತ್ತದೆ ಎನ್ನುತ್ತಾರೆ ಗೋಪಿ ಹಿರೇಬೆಟ್ಟು.
ಗಣೇಶ ಸಣ್ಣಕ್ಕಿಬೆಟ್ಟು
ವೃತ್ತಿ: ಇಲೆಕ್ಟ್ರಿಕಲ್ ಮೆಕ್ಯಾನಿಕಲ್, ಹವ್ಯಾಸಿ ವ್ಯಂಗ್ಯಚಿತ್ರಕಾರ
ಊರು: ಸಣ್ಣಕ್ಕಿಬೆಟ್ಟು
ಹಿರಿಯ ವ್ಯಂಗ್ಯಚಿತ್ರಕಾರ ಗೋಪಿ ಹಿರೇಬೆಟ್ಟು ಅವರ ಪ್ರಭಾವಕ್ಕೊಳಗಾಗಿ, ಅವರಿಂದಲೇ ತರಬೇತಿ ಪಡೆದು ಕಾರ್ಟೂನ್ ಲೋಕದಲ್ಲಿ ಹೆಸರು ಮಾಡಿದವರು ಸಣ್ಣಕ್ಕಿಬೆಟ್ಟು ಗ್ರಾಮದ ಗಣೇಶ ನಾಯಕ. ಪರ್ಕಳದಲ್ಲಿ ಇಲೆಕ್ಟ್ರಿಕಲ್ ಮೆಕ್ಯಾನಿಕಲ್ ಉದ್ಯೋಗ ನಡೆಸುತ್ತಿರುವ ಇವರು 2003 ರಿಂದ ಈವರೆಗೆ 500 ಕ್ಕೂ ಅಧಿಕ ಕಾರ್ಟೂನ್‌ಗಳನ್ನು ರಚಿಸಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸಮಾಜದ ಓರೆ ಕೋರೆಗಳನ್ನು ನಮ್ಮ ವಕ್ರ ರೇಖೆಯಲ್ಲಿ ವಿಡಂಬಿಸುವುದರ ಜೊತೆಗೆ ಹಾಸ್ಯದ ರೂಪವನ್ನು ಕೊಟ್ಟು ಜನರಿಗೆ ತಲುಪುವಂತೆ ಮಾಡುವಲ್ಲಿ ವ್ಯಂಗ್ಯಚಿತ್ರ ಉಪಯುಕ್ತ ಅನಿಸುತ್ತದೆ ಎಂಬುದು ಗಣೇಶರ ಅಭಿಮತ.
ಕೊರಲಕುಂಟೆ ಎಸ್. ದಯಾನಂದ
ವೃತ್ತಿ: ಶುಶ್ರೂಷಕರು
ಊರು: ಚಿತ್ರದುರ್ಗ
ಕೋಟೆ ನಾಡು ಚಿತ್ರದುರ್ಗದ ಎಸ್.ದಯಾನಂದ ವೃತ್ತಿಯಲ್ಲಿ ಶುಶ್ರೂಷಕರು. 1994 ರಲ್ಲಿ ವ್ಯಂಗ್ಯಚಿತ್ರ ಬರೆಯಲು ಪ್ರಾರಂಭಿಸಿದ ಇವರು ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಕಾರ್ಟೂನ್‌ಗಳನ್ನು ಬರೆಯುತ್ತಿದ್ದಾರೆ. ಬಾಲ್ಯದಿಂದಲೂ ವ್ಯಂಗ್ಯಚಿತ್ರದ ಕುರಿತು ಆಸಕ್ತಿ ಹೊಂದಿದ್ದ ಇವರಿಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಾರ್ಟೂನ್‌ಗಳೇ ಪ್ರೇರಣೆ ಎನ್ನುವ ಇವರಿಗೆ 2003 ನೇ ಇಸವಿಯಲ್ಲಿ ಕಲಬುರ್ಗಿಯಲ್ಲಿ 'ಅಜಾದ್ ವಿಚಾರ ವೇದಿಕೆ' ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವ್ಯಂಗ್ಯ ಚಿತ್ರ ವಿಭಾಗದಲ್ಲಿ ಪ್ರಥಮ ಬಹುಮಾನ ದೊರೆತಿದೆ.
ಈರಣ್ಣ ಬೆಂಗಾಲಿ
ವೃತ್ತಿ: ಸಾಹಿತಿ, ವ್ಯಂಗ್ಯಚಿತ್ರಕಾರ
ಊರು: ರಾಯಚೂರು
ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಾರ್ಟೂನ್‌ಗಳನ್ನು ನೋಡುತ್ತಲೇ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕಾರ್ಟೂನ್ ಜಗತ್ತಿಗೆ ಕಾಲಿಟ್ಟವರು ಈರಣ್ಣ ಬೆಂಗಾಲಿ. ಕಾರ್ಟೂನ್ ಜಗತ್ತಿನ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಈರಣ್ಣ, ನಾಡಿನ ಪ್ರಮುಖ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಈಗಾಗಲೇ ಸಾವಿರಾರು ಕಾರ್ಟೂನ್‌ಗಳನ್ನು ರಚಿಸಿರುವ ಇವರು ಕರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಹಲವಾರು ಕಾರ್ಟೂನ್‌ಗಳನ್ನು ರಚಿಸಿ ಜನರ ಮನಗೆದ್ದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವ್ಯಂಗ್ಯಚಿತ್ರ ರಚನೆಯ ಜೊತೆಗೆ ಹೈಕು ಮತ್ತು ಗಜಲ್ ಸಂಕಲನ ಕೂಡ ತಯಾರಿಸಿದ್ದಾರೆ. ಬೆಂಗಳೂರಿನ ಮೆಟ್ರೋ ರೈಲಿನ ಡಿಜಿಟಲ್ ಡಿಸ್ಪ್ಲೇಯಲ್ಲಿ ಸ್ವಚ್ಛ ಭಾರತ ಅಭಿಯಾನದ ಕುರಿತ ಇವರ ವ್ಯಂಗ್ಯಚಿತ್ರ ಪ್ರದರ್ಶನವಾಗಿರುವುದು ಇವರ ಕಲೆಗೆ ಹಿಡಿದ ಕೈಗನ್ನಡಿ.
ಪಿ.ಜಿ.ನಾರಾಯಣ
ವೃತ್ತಿ: ನಿವೃತ್ತ ಸಹಾಯಕ ಲೆಕ್ಕಾಧಿಕಾರಿ
ಊರು: ಬೆಂಗಳೂರು
ಹೈಸ್ಕೂಲಿನಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಚಿತ್ರಕಲೆಯಲ್ಲಿ ಆಸಕ್ತಿ ಹುಟ್ಟಿತ್ತು. ಕಾಲೇಜು ಓದುತ್ತಿರುವಾಗ ವ್ಯಂಗ್ಯಚಿತ್ರ ಬರೆಯಲು ಪ್ರಾರಂಭಿಸಿದೆ. ಅಲ್ಲದೇ ಆ ದಿನಗಳಲ್ಲಿ ನಾನು ಬರೆದ ವ್ಯಂಗ್ಯಚಿತ್ರಗಳು ಕನ್ನಡದ ಪತ್ರಿಕೆಗಳಲ್ಲೂ ಪ್ರಕಟವಾಗತೊಡಗಿದವು. ಪರಿಣಾಮ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕಾರ್ಟೂನ್ ರಚಿಸುವುದನ್ನು ಮಾತ್ರ ಬಿಡಲಿಲ್ಲ! ಎಂದು ಕಾರ್ಟೂನ್ ಪಯಣದ ಕುರಿತು ವಿವರಿಸುತ್ತಾರೆ ಪಿ ಜಿ ನಾರಾಯಣ. ಜಾಗೃತಿ ಮೂಡಿಸುವಲ್ಲಿ ವ್ಯಂಗ್ಯಚಿತ್ರಗಳ ಪಾತ್ರ ಮಹತ್ವ ಎನ್ನುವ ಇವರ ವ್ಯಂಗ್ಯಚಿತ್ರಗಳು ಹಲವಾರು ಕಡೆ ಪ್ರದರ್ಶನಗೊಂಡಿದೆ.
ರವಿ ಎಲ್. ಪೂಜಾರಿ
ವೃತ್ತಿ: ಖಾಸಗಿ ಕಂಪನಿಯಲ್ಲಿ ಅಸೋಸಿಯೇಟ್ ಕ್ರಿಯೇಟಿವ್ ಲೀಡ್, ಹವ್ಯಾಸಿ ವ್ಯಂಗ್ಯಚಿತ್ರಕಾರ
ಊರು: ಮುಧೋಳ, ಬಾಗಲಕೋಟೆ
ದಾವಣಗೆರೆಯ ಕಲಾ ಮಹಾವಿದ್ಯಾಲಯದಲ್ಲಿ ಫೈನ್ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದ ಇವರು ಆರ್.ಕೆ.ಲಕ್ಷ್ಮಣ, ಗುಜ್ಜಾರಪ್ಪ ಮುಂತಾದ ಪ್ರಖ್ಯಾತ ಕಾರ್ಟೂನಿಸ್ಟ್‌ಗಳಿಂದ ಪ್ರೇರಣೆ ಪಡೆದು ವ್ಯಂಗ್ಯಚಿತ್ರ ಬರೆಯಲು ಪ್ರಾರಂಭಿಸಿದರು. ಕಾಲೇಜು ದಿನಗಳಲ್ಲೇ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗತೊಡಗಿದವು. ಬಳಿಕ ಸುಧಾ, ಮಯೂರ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಕತೆಗಳಿಗೆ ಇಲಸ್ಟ್ರೇಷನ್ ಕೂಡ ಬರೆಯುತ್ತಿದ್ದಾರೆ. ಸಾಮಾಜಿಕ ತಲ್ಲಣಗಳ ಜೊತೆಗೆ ಈಗ ಪ್ರಪಂಚದಾದ್ಯಂತ ವಕ್ಕರಿಸಿರುವ ಕರೋನಾ ವೈರಸ್ ಕುರಿತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಪಾಲಿಸುತ್ತಿಲ್ಲ. ಆದರೆ ವ್ಯಂಗ್ಯಚಿತ್ರಗಳು ಜನಜಾಗೃತಿ ಮೂಡಿಸುವಲ್ಲಿ ಸಹಕಾರಿ. ಆದ್ದರಿಂದ ವ್ಯಂಗ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ ಎನ್ನುತ್ತಾರೆ ರವಿ ಪೂಜಾರಿ. ಕಾರ್ಟೂನ್‌ಗಳ ರಚನೆಯ ಜೊತೆಗೆ ಪೇಂಟಿಂಗ್, ಸ್ಪೀಡ್ ಪೇಂಟಿಂಗ್, ಸ್ಟೋರಿ ಬೋರ್ಡಿಂಗ್, ಚಲನಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಕಾರ್ಟೂನ್‌ಗಳಿಗೆ ಇಂಟರ್‌ನ್ಯಾಷನಲ್ ಕ್ಯಾರಿಕೇಚರ್ ಕಾಂಟೆಸ್ಟ್ 2011- ಸಮಾಧಾನಕರ ಬಹುಮಾನ, ರಾಜಾಜಿನಗರ ಹಬ್ಬದಲ್ಲಿ ಗೌರವ ಪ್ರಶಸ್ತಿ ಮುಂತಾದ ಪುರಸ್ಕಾರಗಳು ದೊರೆತಿವೆ.
ರಾಂಚಂದ್ರ ಕೊಪ್ಪಲು
ವೃತ್ತಿ: ಕೃಷಿಕ, ಪತ್ರಕರ್ತ, ಹವ್ಯಾಸಿ ಬರಹಗಾರ
ಊರು: ಕೊಪ್ಪಲು, ತೀರ್ಥಹಳ್ಳಿ, ಶಿವಮೊಗ್ಗ
ಬಾಲ್ಯದ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳೇ ನಾನೊಬ್ಬ ವ್ಯಂಗ್ಯಚಿತ್ರಕಾರನಾಗಲು ಸಹಕಾರಿಯಾಯಿತು ಎನ್ನುತ್ತಾರೆ ರಾಂಚಂದ್ರ ಕೊಪ್ಪಲು. ತಮ್ಮದೇ ತೋಟದಲ್ಲಿ ಕೃಷಿಯನ್ನು ನಡೆಸುತ್ತಾ, ಪತ್ರಕರ್ತರಾಗಿ ಸುತ್ತಲಿನ ಘಟನಾವಳಿಗಳ ಕುರಿತು ಜನರಿಗೆ ಮಾಹಿತಿ ತಲುಪಿಸುತ್ತಾ ತಮ್ಮ ಬಿಡುವಿಲ್ಲದ ಸಮಯದಲ್ಲೂ ಕಾರ್ಟೂನ್‌ಗಳನ್ನು ರಚಿಸುತ್ತಾ ಪ್ರಸಿದ್ಧರಾಗಿದ್ದಾರೆ. ಸಮಾಜದ ಓರೆಕೋರೆಗಳನ್ನು ತಿದ್ದುವ, ಜನರಲ್ಲಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವ ಜವಾಬ್ದಾರಿ ವ್ಯಂಗ್ಯಚಿತ್ರಗಳಿಗಿವೆ ಎನ್ನುವ ಇವರು ಪ್ರತಿನಿತ್ಯ ಸೋಷಿಯಲ್ ಮೀಡಿಯಾಗಳಲ್ಲಿ ನಗೆಮದ್ದು ಎನ್ನುವ ಹೆಸರಿನಲ್ಲಿ ಕಾರ್ಟೂನ್‌ಗಳನ್ನು ಪೋಸ್ಟ್ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಪ್ರಶಸ್ತಿಗಳ ವಿಚಾರಕ್ಕೆ ಬಂದರೆ ಪ್ರಶಸ್ತಿಗಳು ಅರಸಿಯು ಬಂದಿಲ್ಲ. ನಾನು ಹುಡುಕಿಕೊಂಡು ಹೋಗಿಲ್ಲ! ಎಂದು ನಗೆ ಬೀರುತ್ತಾರೆ.
ಗೊರವರ ಯಲ್ಲಪ್ಪ
ವೃತ್ತಿ: ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್
ಊರು: ಶಾಗೋಟಿ, ಗದಗ
ವೃತ್ತಿ: ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್
ಊರು: ಶಾಗೋಟಿ, ಗದಗ
ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರಾಗಿ ಕೆಲಸ ನಿರ್ವಹಿಸುವ ಗೊರವರ ಯಲ್ಲಪ್ಪ ಮೂಲತಃ ಕೃಷಿ ಕುಟುಂಬದಿಂದ ಬಂದವರು. ಬಿಡುವಿನ ವೇಳೆಯಲ್ಲಿ ಕಚಗುಳಿ ನೀಡುವ ಕಾರ್ಟೂನ್ ರಚನೆಯಲ್ಲೂ ಸಿದ್ಧಹಸ್ತರು. ಕನ್ನಡದ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಕಾರ್ಟೂನ್‌ಗಳನ್ನು ಗಮನಿಸುತ್ತಾ 1995-96 ರ ಅವಧಿಯಲ್ಲಿ ಕಾರ್ಟೂನ್ ಬರೆಯಲು ಆರಂಭಿಸಿದರು. 10 ಪುಟಗಳಲ್ಲಿ ಹೇಳಬಹುದಾದ ವಿಷಯವನ್ನು ಕೇವಲ ಒಂದು ವ್ಯಂಗ್ಯಚಿತ್ರದಲ್ಲಿ ಹೇಳಬಹುದು ಎನ್ನುವ ಇವರು ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಲ್ಲದೇ ಯುವ ಕಲಾವಿದರಿಗೆ ಮಾರ್ಗದರ್ಶಕರಾಗಿಯೂ ಪ್ರಸಿದ್ದರು.
ಜಗದೀಶ ಎಚ್. ಭಜಂತ್ರಿ
ವೃತ್ತಿ: ವಿದ್ಯುತ್ ಗುತ್ತಿಗೆದಾರ
ಊರು: ಬಾಗಲಕೋಟೆ
ಬಾಲ್ಯದಿಂದಲೂ ಹಾಸ್ಯ ಪ್ರವೃತ್ತಿ ಹೊಂದಿದ್ದ ಜಗದೀಶ ಅವರು ಕಾಲೇಜು ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಚುಟುಕು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದರು. ಆದರೆ ಯಾರೂ ಇವರೊಬ್ಬ ವ್ಯಂಗ್ಯಚಿತ್ರಕಾರರಾಗುತ್ತಾರೆ ಅಂದುಕೊಂಡಿರಲಿಲ್ಲ. ಆದರೆ ಜಗದೀಶ ಮಾತ್ರ 1996 ರಿಂದ ವ್ಯಂಗ್ಯಚಿತ್ರ ಬರೆಯಲು ಶುರುಮಾಡಿಯೇ ಬಿಟ್ಟರು! ಶಿಕ್ಷಣ ಪಡೆದ ಬಳಿಕ ವಿದ್ಯುತ್ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದರೂ ಕಾರ್ಟೂನ್ ಲೋಕವನ್ನು ಮಾತ್ರ ಬಿಡಲಿಲ್ಲ. ಪರಿಣಾಮ ಇಂದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಕ್ಕೂ ಅಧಿಕ ಕಾರ್ಟೂನ್‌ಗಳು ಪ್ರಕಟಣೆಯ ಭಾಗ್ಯ ಕಂಡಿದೆ. ವ್ಯಂಗ್ಯಚಿತ್ರ ಸಮಾಜದ ಅಂಕುಡೊಂಕನ್ನು ಬರೀ ಒಂದೆರಡು ರೇಖೆ ಮಾತುಗಳಲ್ಲಿ ತಿದ್ದಬಲ್ಲದು ಎನ್ನುವ ಇವರು ಹಲವಾರು ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ.
ಪ್ರಶಾಂತ ಎಸ್. ನಾಯಕ
ವೃತ್ತಿ: ಸ್ವಂತ ಭೂ ವ್ಯವಹಾರ ಉದ್ಯಮ (ಫಾರ್ಚೂನ್ ಪ್ರಾಪರ್ಟೀಸ್, ಹುಬ್ಬಳ್ಳಿ)
ಊರು: ದಾಂಡೇಲಿ, ಉತ್ತರಕನ್ನಡ
ಪ್ರಶಾಂತ ಭಾರತ ಎಂಬ ಹೆಸರಿನಲ್ಲಿ ಕಾರ್ಟೂನ್‌ಗಳನ್ನು ರಚಿಸುವ ಇವರು ಧಾರವಾಡದ ಪ್ರಸಿದ್ಧ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಬಾಲ್ಯದಲ್ಲಿ ನೆರೆಹೊರೆಯಲ್ಲಿ ನಡೆಯುವ ನೈಜ ಹಾಸ್ಯ ಪ್ರಸಂಗಗಳೇ ಪ್ರೇರಣೆ ಎನ್ನುವ ಇವರು 1990 ರಲ್ಲಿ ಅಂದರೆ ತಮ್ಮ 14 ನೇ ವಯಸಿನಲ್ಲಿ ಕಾರ್ಟೂನ್‌ಗಳನ್ನು ಬರೆಯಲು ಆರಂಭಿಸಿ ಈವರೆಗೆ ಸುಧಾ, ಪ್ರಜಾವಾಣಿ, ತುಷಾರ ಹೀಗೆ ಹಲವಾರು ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕಾರ್ಟೂನ್‌ಗಳನ್ನು ಬರೆದಿದ್ದಾರೆ. ಪತ್ರಿಕೆಯಲ್ಲಿ ಮೂಡಿಬರುವ ವ್ಯಂಗ್ಯಚಿತ್ರಗಳು ಓದುಗರಿಗೆ ಹಾಸ್ಯರೂಪದಲ್ಲಿ ರಂಜಿಸುವುದರಿಂದ ಆ ಮೂಲಕವೇ ಹೆಚ್ಚಿನ ಜನಜಾಗೃತಿಗೆ ವ್ಯಂಗ್ಯಚಿತ್ರಗಳು ಸಹಕಾರಿಯಾಗುತ್ತವೆ ಎಂಬುದು ಇವರ ಅಂಬೋಣ. ಸಾಕಷ್ಟು ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಪ್ರಶಾಂತ ಅವರು ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅಲ್ಲದೇ ‘ಕರ್ನಾಟಕ ವ್ಯಂಗ್ಯಚಿತ್ರ ಸಾಹಿತ್ಯ ಕಲಾ ಮಾಧ್ಯಮ' ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಲ್ಲಿ ಉಲ್ಲೇಖಿಸಿರುವ ವ್ಯಂಗ್ಯಚಿತ್ರಕಾರರಷ್ಟೇ ಅಲ್ಲ. ಸಾಕಷ್ಟು ಮಂದಿ ಕಾರ್ಟೂನ್ ಲೋಕದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಂತೇಶ ಬಡಿಗೇರ್, ಜೀವನ್ ಶೆಟ್ಟಿ, ಏಕನಾಥ ಬೊಂಗಾಳೆ, ಉದಯ್ ವಿಟ್ಲ, ಗಂಗಾಧರ್ ಅಡ್ಡೇರಿ, ರಾಮಕೃಷ್ಣ ಸಿದ್ರಪಾಲ್, ದೇವಿದಾಸ ಸುವರ್ಣ, ವೆಂಕಟೇಶ ಇನಾಮ್ದಾರ್, ಎಂ.ವಿ.ಶಿವರಾಂ, ಹೆಚ್.ಬಿ.ಮಂಜುನಾಥ, ವಿಶ್ವನಾಥ ಶಿವರಾಮ... ಹೀಗೆ ವ್ಯಂಗ್ಯಲೋಕದ ಗರಡಿಯಲ್ಲಿ ಕಲಾವಿದರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.
Super article
ReplyDelete