Monday, May 25, 2020

ಕಡಲ ತೀರದ ಜನರ ಬಾಳು-ಬದುಕಿನ ಚಿತ್ರ

- ಕಡಲಿಗರ ಸಂಸ್ಕೃತಿ
- ಲೇಖಕರು: ಡಾ. ಶ್ರೀಧರ ಉಪ್ಪಿನಗಣಪತಿ
- ಪ್ರಕಾಶಕರು: ಅದಿತಿ ಪ್ರಕಾಶನ

ಡಾ. ಶ್ರೀಧರ ಗೌಡ ಉಪ್ಪಿನಗಣಪತಿ ಅವರ ಸಂಶೋಧನಾ ಗ್ರಂಥ, 'ಕಡಲಿಗರ ಸಂಸ್ಕೃತಿ'. ಕಡಲಿಗರ ಮೂಲದ ಕುರಿತು ಹಲವಾರು ಅಭಿಪ್ರಾಯಗಳು, ಕಥೆಗಳು ಇವೆ. ಕರ್ನಾಟಕವು 302 ಕಿ.ಮಿ. ಉದ್ದದ ಕಡಲ ತೀರ ಪ್ರದೇಶವನ್ನು ಹೊಂದಿದೆ. ಉತ್ತರ ಕನ್ನಡದ ಪೂಜಾರಿ ಗ್ರಾಮದಿಂದ ಆರಂಭಿಸಿ, ದಕ್ಷಿಣ ಕನ್ನಡದ ಉಳ್ಳಾಲದ ತನಕ ಅದರ ಸೀಮೆ ವ್ಯಾಪಿಸಿದೆ. ಈ ಸೀಮೆಯಲ್ಲಿ ಬೋವಿ, ಹರಿಕಾಂತ, ಖಾರ್ವಿ, ಮೊಗವೀರ, ಅಂಬಿಗ, ಪಾಗಿ ಮತ್ತು ನಾಖುದಾ ಸಮುದಾಯದ ಜನರಿದ್ದಾರೆ. ಇವರೆಲ್ಲಾ ಕಡಲನ್ನೇ ನಂಬಿ ಬದುಕುವ ಜನರು. ನೂರಾರು ಜನರನ್ನು ಭೇಟಿಯಾಗಿ, ನೂರಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್ ಗ್ರಂಥಗಳನ್ನು ಅಭ್ಯಸಿಸಿ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯಲ್ಲಿ ಕಡಲಿಗರ ಸಂಸ್ಕೃತಿಯ ಮೂಲದ ಚಿತ್ರಣವಿದೆ. ಕಡಲ ತೀರದ ಜನರ ಬದುಕಿನ ಕಥೆ ಹೇಳುವ ಚಿತ್ರಗಳಿವೆ. ರೇಖಾಚಿತ್ರಗಳಿವೆ. ಕಡಲ ತೀರದ ಜನ ಸಮುದಾಯದಲ್ಲಿ ಹುಟ್ಟು, ಮದುವೆ, ಸಾವಿನ ಸಂದರ್ಭದಲ್ಲಿ ಆಚರಿಸಲ್ಪಡುವ ಸಂಪ್ರದಾಯಗಳು, ವಸತಿ ವ್ಯವಸ್ಥೆಯ ಕುರಿತಾದ ವಿವಿಧ ಚಿತ್ರಣಗಳು, ಒಳಾಡಳಿತ ವ್ಯವಸ್ಥೆ, ಕಡಲಿಗರ ಸೀಮೆಗಳು, ನಾಖುದಾ ಸಮುದಾಯದ ಮೊಹಲ್ಲಾಗಳು, ಆಹಾರ ಸ್ವರೂಪ, ಉಡುಗೆ-ತೊಡುಗೆ, ದೇವತಾರಾಧನೆ, ಹಬ್ಬಗಳು, ಸಮಾಜ, ಕುಟುಂಬ, ಆಟಗಳು, ಬಲೆಗಳನ್ನು ಸಿದ್ಧಪಡಿಸುವ ಕಲೆ, ಕಡಲಿಗರ ಆತಿಥ್ಯ, ನಂಬುಗೆಗಳು, ಗಾದೆ ಮಾತು, ಒಗಟುಗಳು... ಹೀಗೆ, ಕಡಲಿಗರ ಬದುಕಿನ ವಿವಿಧ ಮುಖಗಳ ದರ್ಶನವಿದೆ.

-ಎಂ.ಎಸ್.ಶೋಭಿತ್ ಮೂಡ್ಕಣಿ

(ಮೇ.26, 2020 ರ ಉದಯವಾಣಿ ಜೋಶ್ ಪುರವಣಿಯ 'ನಾನು ಓದಿದ ಪುಸ್ತಕ' ಕಾಲಂನಲ್ಲಿ ಪ್ರಕಟಿತ ಲೇಖನ.) 

No comments:

Post a Comment