ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಮೊಬೈಲ್ ಫೋನ್ ಸಂದೇಶಗಳ ಧ್ವನಿ ಯಾರದೆನ್ನುವ ಯೋಚನೆ ನಿಮಗೆ ಬಂದಿದೆಯೇ? ಆ ಕಲಾವಿದೆಯರ ಪರಿಚಯ ಇಲ್ಲಿದೆ. ವಿವಿಧ ಹಿನ್ನೆಲೆಯಿಂದ ಬಂದಿರುವ ಕಂಠದಾನ ಕಲಾವಿದೆಯರು, ಕೊರೊನಾ ವಿರುದ್ಧದ ಸಾಮಾಜಿಕ ಚಳವಳಿಯಲ್ಲಿ 'ಧ್ವನಿ'ಪಾತ್ರ ವಹಿಸಿದ್ದಾರೆ.
-ಎಂ.ಎಸ್.ಶೋಭಿತ್
'ನೋವಲ್ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯುವಿನಿಂದ ನಿಮ್ಮ ಬಾಯಿ ಮುಚ್ಚಿ. ಕೈಗಳನ್ನು ಆಗಾಗ ಸಾಬೂನು ಹಚ್ಚಿ ತೊಳೆಯುತ್ತಿರಿ. ನಿಮ್ಮ ಕಣ್ಣು,ಮೂಗು, ಬಾಯಿಯನ್ನು ಮುಟ್ಟುತ್ತಿರಬೇಡಿ. ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಆಗುತ್ತಿದ್ದರೆ, ಅವರಿಂದ ಕನಿಷ್ಟ 1ಮೀ. ದೂರದಲ್ಲಿರಿ.'
ಈ ಜಾಗೃತಿ ಸಂದೇಶವನ್ನು ನೀವು ಖಂಡಿತ ಕೇಳಿರುತ್ತೀರಿ. ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ದಿನದಿಂದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕ್ಷೇಮ ಮಂತ್ರಾಲಯ, ಜನರಲ್ಲಿ ವೈರಸ್ ಕುರಿತು ಜಾಗೃತಿ ಮೂಡಿಸಲು ಫೋನ್ ಮೂಲಕ ಈ ಧ್ವನಿಯನ್ನು ಬಿತ್ತರಿಸತೊಡಗಿತು. ಹಾಗಾದರೆ ಈ ಧ್ವನಿ ಯಾರದ್ದು ಎಂಬ ಕುತೂಹಲ ನಿಮಗಿರಬೇಕಲ್ಲವೇ? ಇವರು ಕಾರ್ಟೂನ್ ಲೋಕದಿಂದ ಹಿಡಿದು ಪ್ರಕಟಣೆ, ಜಾಹೀರಾತು, ಸಾಕ್ಷ್ಯಚಿತ್ರ, ಕಿರುಚಿತ್ರಗಳಿಗೂ ಕಂಠದಾನ ಮಾಡಿರುವ ವಿಶಿಷ್ಟ ಕಲಾವಿದರು. ಅವರಲ್ಲಿ ಕೆಲವು ಕಲಾವಿದರ ಪರಿಚಯ ಮಾಡಿಕೊಳ್ಳೋಣ ಬನ್ನಿ.
-ಡಾರೆಲ್ ಜೆಸಿಕಾ ಫರ್ನಾಂಡೀಸ್:
ವೃತ್ತಿಯಲ್ಲಿ ದೈಹಿಕ ಶಿಕ್ಷಕಿಯಾಗಿರುವ ಜೆಸಿಕಾ ಮೂಲತಃ ಮಂಗಳೂರಿನ ಪಡೀಲ್‌ನವರು. 2013ರಲ್ಲಿ ದೆಹಲಿಯ ಕನ್ನಡ ಶಾಲೆಗೆ ದೈಹಿಕ ಶಿಕ್ಷಕಿಯಾಗಿ ಸೇರಿದರು. ಅಲ್ಲಿ ಅವರ ಧ್ವನಿಯನ್ನು ಗುರುತಿಸಿದವರು ದೆಹಲಿ ಕನ್ನಡ ಶಾಲೆಯ ಸಂಚಾಲಕ ಸರವು ಕೃಷ್ಣ ಭಟ್. `ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಸರವು ಕೃಷ್ಣ ಭಟ್ ಅವರು ನನ್ನ ಧ್ವನಿ ಗುರುತಿಸಿ ವಾಯ್ಸ್ ಓವರ್ ಇಂಡಸ್ಟ್ರಿಯಲ್ಲಿ ನನ್ನನ್ನು ಪರಿಚಯಿಸಿದರು. ಧ್ವನಿದಾನ ಕೂಡ ನಟನೆಯಂತೆಯೇ ಒಂದು ಕಲೆ. ಇಲ್ಲಿ ಧ್ವನಿಯಿಂದಲೇ ನಟಿಸಬೇಕಾಗುತ್ತದೆ' ಎನ್ನುತ್ತಾರೆ ಜೆಸಿಕಾ.
ಕಳೆದ 7 ವರ್ಷಗಳಿಂದ ಬಿಡುವಿನ ವೇಳೆಯಲ್ಲಿ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಸಾರವಾಗುವ ಅನೇಕ ಪ್ರಕಟಣೆಗಳು, ಜಾಹೀರಾತುಗಳಿಗೆ ಅವರು ಧ್ವನಿಯಾಗಿದ್ದಾರೆ. ಕೊರೊನಾ ಮೊದಲ ಹಂತದ ಜಾಗೃತಿ ಸಂದೇಶಕ್ಕೂ ಧ್ವನಿ ಅವರದೇ. `ಜಾಗೃತಿ ಸಂದೇಶ ಮೂರು ಹಂತಗಳಲ್ಲಿ ಭಿತ್ತರಗೊಂಡಿದೆ. ಮೊದಲ ಹಂತದ ಧ್ವನಿ ನನ್ನದೇ ಆಗಿದ್ದರಿಂದ ಜನರಿಗೆ ಉಪದ್ರವ ಆಗಿದ್ದೇ ಹೆಚ್ಚಿರಬಹುದು. ಬರುಬರುತ್ತಾ ಜನರಿಗೆ ಸಂದೇಶದ ಅನಿವಾರ್ಯತೆ ಅರಿವಾಯಿತು. ಜಾಗೃತಿ ಮೂಡಿಸಿದ ಹೆಮ್ಮೆಯಂತೂ ಇದೆ' ಎನ್ನುತ್ತಾರೆ ಜೆಸಿಕಾ
-ವಿದ್ಯಾ ನಾರಾಯಣ ಭಟ್:
ಕನ್ನಡದ ಎರಡು ಮತ್ತು ಮೂರನೇ ಹಂತದ ಕೊರೊನಾ ಜಾಗೃತಿ ಸಂದೇಶಕ್ಕೆ ಧ್ವನಿಯಾದವರು ವಿಟ್ಲ ಸಮೀಪದ ಮುಳಿಯಾದ ವಿದ್ಯಾ ನಾರಾಯಣ ಭಟ್. ಕಾಲೇಜು ದಿನಗಳಲ್ಲಿ ಡ್ರಾಮಾ, ನೃತ್ಯ, ಸಂಗೀತ, ಕ್ರೀಡೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ವಿದ್ಯಾ ಈ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ವ್ಯಾಸಂಗ ಮುಗಿಸಿದ ಬಳಿಕ ವಿಜ್ಞಾನಿ ಪುತ್ತೂರಿನ ನಾರಾಯಣ ಭಟ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ ಇವರು ಪತಿಯ ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಶಿಲ್ಲಾಂಗ್, ಸೂರತ್, ಸಿಕ್ಕಿಂ ಮೊದಲಾದ ಕಡೆ ನೆಲೆಸಬೇಕಾಗಿ ಬಂತು. 2009 ರಲ್ಲಿ ದೆಹಲಿಗೆ ಆಗಮಿಸಿದ ಅವರಿಗೆ ಪರಿಚಯವಾಗಿದ್ದು ದೆಹಲಿಯ ಕರ್ನಾಟಕ ಸಂಘ. ಜೆಸಿಕಾ ಅವರಂತೆಯೇ ವಿದ್ಯಾ ಅವರಿಗೂ ಕೃಷ್ಣ ಭಟ್‌ರ ಮಾರ್ಗದರ್ಶನ ದೊರೆಯಿತು.
ಸರ್ಕಾರಿ ಪ್ರಕಟಣೆಗಳು, ರೇಡಿಯೋ ಡ್ರಾಮಾಗಳಷ್ಟೇ ಅಲ್ಲದೇ, ಡಾಲರ್ ಬಿಗ್‌ಬಾಸ್, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ್, ಭೇಟಿ ಬಚಾವೋ-ಭೇಟಿ ಪಡಾವೋ ಹೀಗೆ ಸಾವಿರಾರು ಜಾಹೀರಾತುಗಳು ಮತ್ತು ಸರ್ಕಾರದ ಪ್ರಕಟಣೆಗಳಿಗೆ ವಿದ್ಯಾ ಭಟ್ ಕಂಠಸಿರಿ ಇದೆ. ಆ್ಯನಿಮೇಷನ್ ಪಾತ್ರಗಳಿಗೂ ಧ್ವನಿಯಾಗಿದ್ದಾರೆ. 'ಸರ್ಕಾರಿ ಪ್ರಕಟಣೆಗಳು, ಜಾಹೀರಾತುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಆದರೆ ಆ್ಯನಿಮೇಷನ್‌ಗಳಲ್ಲಿ ಸಂಭಾಷಣೆಗಳನ್ನು ಪಾತ್ರಗಳ ತುಟಿಚಲನೆಗೆ ಹೊಂದಿಸಬೇಕಾಗುತ್ತದೆ. ಇದು ಸವಾಲಿನ ಕೆಲಸ. ಇನ್ನೂ ಒಮ್ಮೊಮ್ಮೆ ಬೆಳಿಗ್ಗೆಯಿಂದ ಸಂಜೆಯವರೆಗೂ ಸ್ಟೂಡಿಯೋದಲ್ಲೇ ಇರಬೇಕಾಗುತ್ತದೆ. ಇದಕ್ಕೆಲ್ಲದಕ್ಕೂ ತಾಳ್ಮೆ ಅಗತ್ಯ ಎನ್ನುವ ವಿದ್ಯಾ, ವೈರಸ್ ಕುರಿತು ಜಾಗೃತಿ ಮೂಡಿಸಿದ ಹೆಮ್ಮೆ ಇದೆ ಎನ್ನುತ್ತಾರೆ ವಿದ್ಯಾ ನಾರಾಯಣ ಭಟ್.
-ಟಿಂಟುಮೋಲ್ ಜೋಸೆಫ್:
ಮಲೆಯಾಳಂನ ಧ್ವನಿದಾನ ಕಲಾವಿದೆಯರಲ್ಲಿ ಮುಂಚೂಣಿಯಲ್ಲಿರುವ ಹೆಸರು ಟಿಂಟುಮೋಲ್ ಜೋಸೆಫ್. ಮೂಲತಃ ಕೇರಳದ ಕೋಟೆಯಂ ಪಾಲಾದವರಾದ ಇವರು ಕಳೆದ 24 ವರ್ಷಗಳಿಂದ ಕರ್ನಾಟಕದ ಸುಳ್ಯದಲ್ಲಿ ನೆಲೆಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಕನಸ್ಸನ್ನು ಹೊತ್ತು ದೆಹಲಿಗೆ ಬಂದ ಸಮಯದಲ್ಲಿ ಜೆಎನ್‌ಯು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪುರುಷೋತ್ತಮ ಬಿಳಿಮಲೆ ಅವರು ಈಕೆಯ ಧ್ವನಿ ಸಾಮರ್ಥ್ಯವನ್ನು ಗುರುತಿಸಿ ಖ್ಯಾತ ಕಂಠದಾನ ಕಲಾವಿದ ಸರವು ಕೃಷ್ಣ ಭಟ್ ಅವರಿಗೆ ಈಕೆಯನ್ನು ಪರಿಚಯಿಸಿದರು. ಅಲ್ಲಿಂದ ಮುಂದೆ ಮಲೆಯಾಳಂ ಜೊತೆಗೆ ಕನ್ನಡ, ಹಿಂದಿ, ತಮಿಳು, ಇಂಗ್ಲಿಷ್ ಭಾಷೆಯ ಹಲವಾರು ಜಾಹೀರಾತು, ಸಾಕ್ಷ್ಯಚಿತ್ರ ಮತ್ತು ಮಲೆಯಾಳಂನ ವಿಶೇಷ ಕಾರ್ಯಕ್ರಮಗಳಿಗೆ ಕಂಠದಾನ ಮಾಡಿದ್ದಾರೆ. `ನಾನು ವಾಯ್ಸ್ ಓವರ್ ಆರ್ಟಿಸ್ಟ್ ಆಗಬೇಕೆಂದು ಬಂದವಳಲ್ಲ. ಯುಪಿಎಸ್‌ಸಿ ಕನಸನ್ನು ಹೊತ್ತು ದೆಹಲಿಗೆ ಬಂದಿದ್ದೆ. ಅನಿರೀಕ್ಷಿತವಾಗಿ ವಾಯ್ಸ್ ಓವರ್ ಜಗತ್ತಿಗೆ ಪ್ರವೇಶಿಸಿದೆ. ಮಲೆಯಾಳಂ ಭಾಷೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲು ಅವಕಾಶವೂ ದೊರೆಯಿತು. ಜಾಗೃತಿ ಮೂಡಿಸಿದ ಖುಷಿ ಇದೆ' ಎನ್ನುತ್ತಾರೆ
ಯಾರಿವರು ಸರವು ಕೃಷ್ಣ ಭಟ್?
ಕಳೆದ ನಾಲ್ಕೂವರೆ ದಶಕಗಳಿಂದ ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗ, ಖ್ಯಾತ ಕಂಠದಾನ ಕಲಾವಿದ ಸರವು ಕೃಷ್ಣ ಭಟ್ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದವರು. 1975 ರಲ್ಲಿ ದೆಹಲಿಗೆ ತೆರಳಿದ ಅವರು ಸಾಫ್ಟ್‌ವೇರ್ ಇಂಜೀನಿಯರ್ ಆಗಿ ಹಲವು ವರ್ಷಗಳ ಕಾಲ ಖಾಸಗಿ ಕಂಪನಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಆಸಕ್ತಿಯಿಂದಾಗಿ ವೃತ್ತಿಗೆ ರಾಜೀನಾಮೆ ನೀಡಿ ಆಕಾಶವಾಣಿಯಲ್ಲಿ ಕ್ಯಾಶ್ಯುಯಲ್ ನ್ಯೂಸ್ ರೀಡರ್ ಆಗಿ ಸೇರಿದರು. ಆ ಸಮಯದಲ್ಲಿ ಹಲವಾರು ನಿರ್ಮಾಪಕರ ಪರಿಚಯದಿಂದಾಗಿ ವಾಯ್ಸ್ ಓವರ್ ಜಗತ್ತನ್ನು ಪ್ರವೇಶಿಸಿದರು. ಇದೀಗ ಸುಮಾರು 35 ವರ್ಷಗಳಿಂದ ಕಂಠದಾನ ರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಅಸಂಖ್ಯ ಕಾರ್ಯಕ್ರಮಕ್ಕೆ ಧ್ವನಿದಾನ ನೀಡಿದ್ದಾರೆ. ದೆಹಲಿ ಕನ್ನಡ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರೂ ಆಗಿರುವ ಕೃಷ್ಣ ಭಟ್ ಅವರು ತಮ್ಮ ತಂಡದ ಮೂಲಕ ಹಲವಾರು ಕನ್ನಡಿಗರನ್ನು ಕಂಠದಾನ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. `ವೃತ್ತಿಯ ದೃಷ್ಠಿಯಿಂದ ಅಥವಾ ಸಾಮರ್ಥ್ಯದ ದೃಷ್ಟಿಯಿಂದ ಕೊರೊನಾ ಜಾಗೃತಿ ಧ್ವನಿ ಎನ್ನುವುದು ಬಹಳ ದೊಡ್ಡ ವಿಷಯವಲ್ಲ. ಆದರೆ ಈ ಜಾಗೃತಿ ಧ್ವನಿ ಎನ್ನುವುದು ಬೇಕೋ ಅಥವಾ ಬೇಡವೋ ಅಂತೂ ಎಲ್ಲರೂ ಕೇಳುವಂತಾಗಿದೆ. ಆ ದೃಷ್ಟಿಯಿಂದ ಇದಕ್ಕೆ ಮಹತ್ವವಿದೆ. ಇಂದು ನನ್ನ ಶಿಷ್ಯರು ಈ ಜಾಗೃತಿ ಧ್ವನಿಯಿಂದ ಮುನ್ನೆಲೆಗೆ ಬಂದಿರುವುದು ಖುಷಿ ತಂದಿದೆ' ಎನ್ನುತ್ತಾರೆ ಸರವು ಕೃಷ್ಣ ಭಟ್.
(ಜೂನ್ 11, 2020 ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)
No comments:
Post a Comment