ಖಾಯಿಲೆ ಯಾರಿಗೆ ಬರುವುದಿಲ್ಲ? ಮನುಷ್ಯನಾದವನು ತನ್ನ ಜೀವಿತಾವಧಿಯಲ್ಲಿ ಯಾವುದಾದರು ಖಾಯಿಲೆಗೆ ಒಮ್ಮೆಯಾದರೂ ಒಳಗಾಗುತ್ತಾನೆ. ಅದು ಸಾಂಕ್ರಾಮಿಕ ಖಾಯಿಲೆ ಆಗಿರಬಹುದು ಅಥವಾ ಅಸಾಂಕ್ರಾಮಿಕ ಖಾಯಿಲೆ ಆಗಿರಬಹುದು. ಆದರೆ ಖಾಯಿಲೆ ತುತ್ತಾದಾಗ ಕೇವಲ ವೈದ್ಯರ ಬಳಿ ತೆರಳಿ ಔಷಧಿ ಪಡೆದ ಮಾತ್ರಕ್ಕೆ ಖಾಯಿಲೆ ವಾಸಿಯಾಗುವುದಿಲ್ಲ. ಅದಕ್ಕೆ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದು ಕೂಡ ಅನಿವಾರ್ಯ. ಅಂದರೆ ಯಾವ ಖಾಯಿಲೆ/ರೋಗಕ್ಕೆ ತುತ್ತಾದಾಗ ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು? ಎಂಬುದನ್ನು ಪ್ರತಿಯೊಬ್ಬರೂ ತಿಳಿದಿಟ್ಟುಕೊಳ್ಳಬೇಕಾಗಿದೆ. ಇದನ್ನೇ ಮನಗಂಡು ಜನಸಾಮಾನ್ಯರಿಗೂ ಈ ಮಾಹಿತಿ ತಲುಪಬೇಕೆಂಬ ಉದ್ದೇಶದಿಂದ ಇದೀಗ 'ಏನು ತಿನ್ನಬೇಕು ಏನು ತಿನ್ನಬಾರದು' ಎಂಬ ಪುಸ್ತಕವನ್ನು ಶಿರಸಿಯ ಖ್ಯಾತ ವೈದ್ಯ ಡಾ.ರವಿಕಿರಣ ಪಟವರ್ಧನ್ ಜನತೆಯ ಕೈಗಿಟ್ಟಿದ್ದಾರೆ.
ರಕ್ಷಾ ಪಟವರ್ಧನ್ ಅವರು ಈ ಕೃತಿಯನ್ನು ಪ್ರಕಾಶಿಸಿದ್ದು, ಜ್ವರ, ಮಧುಮೇಹ, ದಮ್ಮು, ಹೊಟ್ಟೆ ಉರಿ, ನೆಗಡಿ, ಬೊಜ್ಜು… ಹೀಗೆ 16 ರೋಗಗಳು ಬಂದಾಗ ಯಾವ ಆಹಾರ ಸೇವಿಸಬೇಕು ಯಾವ ಆಹಾರ ಸೇವಿಸಬಾರದು ಅಂದರೆ ಯಾವ ಖಾಯಿಲೆಗೆ ಯಾವ ಆಹಾರ ಮಾರಕ ಹಾಗೂ ಪ್ರೇರಕ ಎಂಬ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಈ ಕೃತಿಯಲ್ಲಿ ಒಳಗೊಂಡಿರುವ ಮಾಹಿತಿ ವೈಜ್ಞಾನಿಕವಾಗಿ ಇದ್ದರೂ, ಅನಾರೋಗ್ಯದ ಸಂದರ್ಭದಲ್ಲಿ ಸೇವಿಸಬೇಕಾದ ಆಹಾರದ ಬಗ್ಗೆ ತಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ ಎನ್ನುತ್ತಾರೆ ಡಾ.ರವಿಕಿರಣ ಪಟವರ್ಧನ್.
ಡಾ.ಪಟವರ್ಧನ್ ಅವರು ಬಿಎಎಂಎಸ್ ಪದವೀಧರರಾಗಿದ್ದು, 1995 ರಿಂದ ಶಿರಸಿಯಲ್ಲಿ ಆಯುರ್ವೇದ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತದ ಕೆಲವೇ ಕೆಲವು ನಗದು ರಹಿತ ಕ್ಲಿನಿಕ್‌ಗಳಲ್ಲಿ ಡಾ. ಪಟವರ್ಧನ್ ಅವರ ಕ್ಲಿನಿಕ್ ಕೂಡಾ ಒಂದು. ಇನ್ನೂ ವಿಶೇಷವೆಂದರೆ ಇವರ ಕ್ಲಿನಿಕ್‌ನಲ್ಲಿ ಭಾರತೀಯ ಸೇನೆಯ ಸೈನಿಕರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಅಲ್ಲದೇ ಆರೋಗ್ಯ, ಸರ್ಕಾರಿ ಸೌಲಭ್ಯಗಳು, ಅತಿ ಅವಶ್ಯಕ ವಿಮೆಗಳು ಹೀಗೆ ವಿವಿಧ ವಿಷಯಗಳ ಕುರಿತು ವಿವಿಧ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ ನೀಡಿರುವ ಹೆಗ್ಗಳಿಕೆ ಇವರದ್ದು. ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್ ಲೈನ್ ರಕ್ತನಿಧಿ ಕೇಂದ್ರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನೇತ್ರದಾನದ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡಾ.ರವಿಕಿರಣ ಪಟವರ್ಧನ್ ಅವರ ಸಾರಥ್ಯದ ಸುಭಾಷ್ ಚಂದ್ರ ಬೋಸ್ ಕಾರ್ಯಪಡೆ ಶಿರಸಿ ನಗರದಾದ್ಯಂತ ಜನಪರ ಕಾರ್ಯಗಳನ್ನು ಸಂಘಟಿಸುತ್ತಾ, ಜನತೆಗೆ ಪ್ರವಾಹ, ಕೊರೊನಾದಂತಹ ಸಂಕಷ್ಟದ ಸಮಯ ಬಂದಾಗ ನೆರವಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ಹಲವಾರು ಕಾರ್ಯಕ್ರಮಗಳನ್ನೂ ಏರ್ಪಡಿಸಿದೆ. ಇವರ ಸಾಧನೆಯನ್ನು ಪರಿಗಣಿಸಿ ಬೆಳಗಾವಿಯ ಕೆಎಲ್‌ಇ ಆಯುರ್ವೇದ ಕಾಲೇಜು 'ಸಾಧಕ ವೈಶಿಷ್ಟ್ಯ- 2014' ಪ್ರಶಸ್ತಿ ನೀಡಿ ಗೌರವಿಸಿದೆ.
ಸಾವಿರಾರು ಉಪನ್ಯಾಸ, ಜಾಗೃತಿ ಕಾರ್ಯಕ್ರಮ, ಜನಪರ ಸಂಘಟನೆಗಳ ಮೂಲಕ ಗುರುತಿಸಿಕೊಂಡಿರುವ ಖ್ಯಾತ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ್ ಅವರು ಇದೀಗ ಮಾಹಿತಿಯುತ ಕೃತಿಯನ್ನು ಹೊರತಂದು ಓದುಗರ ಕೈಗಿಡಲು ಯಶಸ್ವಿಯಾಗಿದ್ದಾರೆ.
ಮಾಹಿತಿ & ಬರಹ – ಎಂ.ಎಸ್.ಶೋಭಿತ್ ಮೂಡ್ಕಣಿ
No comments:
Post a Comment