ಹರಿಕಥೆ. ಹಿಂದೂ ಧಾರ್ಮಿಕ ಪ್ರವಚನದ ಒಂದು ರೂಪ ಎಂದು ಪರಿಗಣಿತವಾದ, ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತು ತತ್ವಶಾಸ್ತ್ರ ಸೇರಿರುವ ಒಂದು ಸಂಯುಕ್ತ ಕಲೆ.
ಇಂತಹ ಒಂದು ಅಪರೂಪದ ಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ, ಗಮನ ಸೆಳೆದವರು ಶೃದ್ಧಾ ಭಟ್ ನಾಯರ್ಪಳ್ಳ.
ಮೂಲತಃ ಕಾಸರಗೋಡಿನ ನಾಯರ್ಪಳ್ಳದ ವೈದಿಕ, ಕೃಷಿಕ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಭಟ್ ದಂಪತಿಗಳ ಪುತ್ರಿ ಶೃದ್ಧಾ ಈ ಅಪರೂಪದ ಸಾಧಕಿ.
8ನೆ ವಯಸ್ಸಿಗೇ ಹರಿಕಥೆಗೆ ಶರಣು:
ಪ್ರಸ್ತುತ ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ ಶೃದ್ಧಾ, ಮೂರನೇ ತರಗತಿಯಲ್ಲಿರುವಾಗಲೇ ಶಾಲೆಯ ವಾರ್ಷಿಕೋತ್ಸವದಲ್ಲಿ ಕಥಾಪ್ರಸಂಗ ಹಾಡುವ ಮೂಲಕ ಹರಿಕಥೆ ಹಾಡಲು ಪ್ರಾರಂಭಿಸಿದಳು.
ನಂತರದ ದಿನಗಳಲ್ಲಿ ಅಧ್ಯಾಪಕ ಶೇಖರ್ ಶೆಟ್ಟಿ ಮತ್ತು ಶಂ.ನಾ.ಅಡಿಗ ಕುಂಬಾಳೆ ಅವರಲ್ಲಿ ಅಧ್ಯಯನ ನಡೆಸಿದ್ದಾಳೆ.
ನೂರಾರು ಕಡೆ ಪ್ರದರ್ಶನ:
ಈಗಾಗಲೇ ನೂರಾರು ಕಡೆ ಹರಿಕಥೆ ಪ್ರದರ್ಶನ ನೀಡಿರುವ ಶೃದ್ಧಾ, ಬೆಂಗಳೂರಿನಲ್ಲಿ ನಡೆದ ಛಾತ್ರ ಚಾತುರ್ಮಾಸ್ಯ, ಭಾನಕುಳಿ ಮಠದಲ್ಲಿ ನಡೆದ ಶಂಕರ ಪಂಚಮಿ, ಬಜಕೂಡ್ಲು ಗೋಶಾಲೆಯಲ್ಲೂ ಹರಿಕಥೆ ಪ್ರಸ್ತುತಪಡಿಸಿದ್ದಾಳೆ.
ಸಿಡಿ ಲೋಕಾರ್ಪಣೆ:
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಶ್ರೀರಾಘವೇಶ್ವರ ಶ್ರೀಗಳ ಛಾತ್ರ ಚಾತುರ್ಮಾಸ್ಯದಲ್ಲಿ 'ಭಕ್ತಪ್ರಹ್ಲಾದ' ಮತ್ತು ಭಕ್ತ ಧ್ರುವ' ಎನ್ನುವ ಎರಡು ಹರಿಕಥೆ ಸಿಡಿ ಲೋಕಾರ್ಪಣೆಗೊಂಡಿದೆ. ಹರಿಕಥೆ ಮತ್ತು ಕಥಾ ಪ್ರಸಂಗದ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದು, ವಿ. ಉಷಾ ಈಶ್ವರ ಭಟ್ ಅವರ ಗರಡಿಯಲ್ಲಿ ಕಲಿಯುತ್ತಿದ್ದಾಳೆ.
ಸಾಧನೆಗೆ ಸಂದಿತು ಪ್ರಶಸ್ತಿ, ಗೌರವಗಳು:
ಹರಿಕಥಾ ಕಲಾವಿದೆ ಶೃದ್ಧಾ ಭಟ್ ನಾಯರ್ಪಳ್ಳ ಈಕೆಯ ಸಾಧನೆಗೆ ರಾಮಚಂದ್ರಾಪುರ ಮಠದ ಛಾತ್ರ ಪುರಸ್ಕಾರ ಸೇರಿದಂತೆ ವಿವಿಧ ಪುರಸ್ಕಾರ ಲಭಿಸಿದೆ. ಅಲ್ಲದೇ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಗಮಕ ಸಮ್ಮೇಳನದ ಸರ್ವಾಧ್ಯಕ್ಷೆ, ಆಳ್ವಾಸ್ ವಿದ್ಯಾರ್ಥಿ ಸಿರಿ ಅಧ್ಯಕ್ಷೆ, ಮಕ್ಕಳ ಧ್ವನಿ ಕವಿಗೋಷ್ಠಿ ಮತ್ತು ಮಕ್ಕಳ ಧ್ವನಿ ಸಮ್ಮೇಳನದ ಸರ್ವಾಧ್ಯಕ್ಷೆಯಾದ ಹೆಗ್ಗಳಿಕೆಯೂ ಈಕೆಗಿದೆ.
"ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿಕೊಳ್ಳುವಲ್ಲಿ ಮಠಗಳು ಹೇಗೆ ಸಹಕಾರಿಯೋ ಹಾಗೆ ಹರಿಕಥೆ ಕೂಡ ಸಹಕಾರಿ ಎನ್ನುವುದರಲ್ಲಿ ಸಂಶಯವಿಲ್ಲ" ಎನ್ನುವ ಶೃದ್ಧಾ, ಮುಂದೆ ಹರಿಕಥೆ ಕಲಾವಿದೆಯಾಗಿ ಮುಂದುವರಿಯುವ ಜೊತೆಗೆ ಅಧ್ಯಾಪಕಿಯಾಗುವ ಗುರಿ ಇದೆ ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ.
No comments:
Post a Comment