Sunday, October 11, 2020

ರಾಮ ರಕ್ಷೆ - ಭಟ್ಟರ ಫೇಸ್‌ಶೀಲ್ಡ್ ಉದ್ಯಮದ ಸಾಹಸ


( 12 ಅಕ್ಟೋಬರ್ 2020 ರ ಉದಯವಾಣಿ ಐಸಿರಿ ಪುರವಣಿಯಲ್ಲಿ ಪ್ರಕಟಿತ ಲೇಖನ )
-ಎಂ.ಎಸ್.ಶೋಭಿತ್, ಮೂಡ್ಕಣಿ
ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಮಾರ್ಚ್ ತಿಂಗಳಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಲಾಕ್‌ಡೌನ್ ದೆಸೆಯಿಂದಾಗಿ ಹಲವಾರು ಕಂಪನಿಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಪರಿಣಾಮ ಹಲವು ಮಂದಿ, `ವರ್ಕ್ ಫ್ರಂ ಹೋಂ’ ಎನ್ನುತ್ತಾ ಊರಿನ ಹಾದಿ ಹಿಡಿದರೆ ಇನ್ನೂ ಕೆಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾದರು. ಇಂಥ  ಸಂಕಷ್ಟದ ಕಾಲದಲ್ಲಿಯೂ ತಮ್ಮ ಕೈಗಾರಿಕೆಗೆ ಹೊಸ ಸ್ವರೂಪ ನೀಡಿ, ಹಲವಾರು ಕಾರ್ಮಿಕರಿಗೆ ಉದ್ಯೋಗವನ್ನೂ ನೀಡಿ ಮಾದರಿಯಾಗಿದ್ದಾರೆ ಹೊನ್ನಾವರ ಮೂಲದ ಉದ್ಯಮಿ ಶ್ರೀರಾಮ್ ಭಟ್.

ಫೇಸ್‌ಶೀಲ್ಡ್ ಉದ್ಯಮ ಪ್ರಾರಂಭ:
ಹತ್ತು ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀರಾಮ್ ಭಟ್, ವಿದೇಶದಲ್ಲಿಯೂ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ 2006 ರಲ್ಲಿ ಬೆಂಗಳೂರಿನಲ್ಲಿ ಶ್ರೀಮಾತಾ ಪೆಸಿಶನ್ ಕಂಪೋನೆಂಟ್ ಎಂಬ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯ ಸ್ವಂತ ಉದ್ಯಮ ಪ್ರಾರಂಭಿಸಿದರು. `ಕೊರೊನಾ ಪ್ರಾರಂಭವಾದ ಬಳಿಕ ಸೋಂಕು ಹರಡದಂತೆ ತಡೆಗಟ್ಟಲು ಫೇಸ್‌ಶೀಲ್ಡ್‌ನ ಅಗತ್ಯ ಇತ್ತು. ಆದರೆ ಫೇಸ್‌ಶೀಲ್ಡ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು  ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ನಮ್ಮ ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆಯೂ ನಿಂತಿತ್ತು. ಹೀಗಾಗಿ ನಮ್ಮ ಕಾರ್ಮಿಕರು ಕೂಡಾ ಸಂಕಷ್ಟದಲ್ಲಿದ್ದರು. ಬೇಡಿಕೆಗೆ ತಕ್ಕಷ್ಟು ಫೇಸ್‌ಶೀಲ್ಡ್‌ಗಳು ವಿದೇಶಗಳಿಂದ ಭಾರತಕ್ಕೆ ಪೂರೈಕೆಯಾಗಲಿಲ್ಲ. ಆ ಸಂದರ್ಭದಲ್ಲಿ ವೈದ್ಯಕೀಯ ಸೇರಿದಂತೆ ವಿವಿಧ ಇಲಾಖೆಗಳು ಫೇಸ್‌ಶೀಲ್ಡ್‌ಗೆ ಬೇಡಿಕೆಯಿಟ್ಟವು. ಇದನ್ನೇ ಸವಾಲಾಗಿ ಸ್ವೀಕರಿಸಿ `ಫೇಸ್‌ಶೀಲ್ಡ್’ ಉದ್ಯಮವನ್ನು ಆರಂಭಿಸಿದೆವು ಎನ್ನುತ್ತಾರೆ ಶ್ರೀರಾಮ್ ಭಟ್.

ಪ್ರಾರಂಭದಲ್ಲಿ ತಮ್ಮ ಬಳಿ ಇರುವ ಉಪಕರಣಗಳನ್ನು ಫೇಸ್‌ಶೀಲ್ಡ್ ತಯಾರಿಕೆಗೆ ಬೇಕಾಗುವಂತೆ ಮಾರ್ಪಾಡು ಮಾಡಿಕೊಂಡರು. ಅದರ ಬೆನ್ನಿಗೇ, ಫೇಸ್‌ಶೀಲ್ಡ್ ತಯಾರಿಕೆಗೆ ಅಗತ್ಯವಿದ್ದ,  ಹಲವು ಉಪಕರಣಗಳನ್ನು ಖರೀದಿಸಿ ಉತ್ಪಾದನೆಗೆ ಮುಂದಾದರು. ಐಎಸ್‌ಓ ಮಾನ್ಯತೆ ಹೊಂದಿರುವ ಈ ಸಂಸ್ಥೆಯಲ್ಲಿ ಪ್ರತಿ ತಿಂಗಳು ಐದು ವಿಧದ ಲಕ್ಷಕ್ಕೂ ಅಧಿಕ ಫೇಸ್‌ಶೀಲ್ಡ್ ಉತ್ಪಾದನೆಯಾಗುತ್ತಿದೆ. ವೈದ್ಯರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರು ಹೀಗೆ ವಿವಿಧ ವಲಯಗಳಿಂದ ಫೇಸ್‌ಶೀಲ್ಡ್‌ಗೆ ಉತ್ತಮ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಶ್ರೀರಾಮ್. ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 25ರೂ. ಗೆ ಗ್ರಾಹಕರಿಗೆ ಫೇಸ್‌ಶೀಲ್ಡ್ ಒದಗಿಸುವ ಮೂಲಕ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ ಕರೆಗೆ ಭಟ್ಟರು ಸ್ಪಂದಿಸಿದ್ದಾರೆ.

ಹೊಸ ಪ್ರಾಡಕ್ಟ್‌ಗಳು ಮಾರುಕಟ್ಟೆಗೆ:
ಇವರ ಕೈಗಾರಿಕಾ ಘಟಕದಲ್ಲಿ ಆಟೋಮೊಬೈಲ್ ಬಿಡಿಭಾಗಗಳು ಮತ್ತು ಫೇಸ್‌ಶೀಲ್ಡ್‌ಗಳ ಜೊತೆಗೆ ಮತ್ತೂ ಕೆಲವು ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ. ಫೇಸ್‌ಶೀಲ್ಡ್ ತಯಾರಿಕೆಯಿಂದಾಗಿ ಸಂಕಷ್ಟದ ಕಾಲದಲ್ಲಿ ನೌಕರರಿಗೆ ಉದ್ಯೋಗ ನೀಡಿದ್ದಲ್ಲದೇ, ಸ್ವ ಉದ್ಯಮದ ಕುರಿತು ಇನ್ನಷ್ಟು ಅನುಭವ ದೊರೆಯಿತು ಎಂಬುದು ಶ್ರೀರಾಮ್ ಅವರ ಅಂಬೋಣ. ಸ್ವದೇಶಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಕನಸಿದ್ದು, ಈಗಾಗಲೇ ಹೊಸ ಉತ್ಪನ್ನಗಳ ತಯಾರಿಕಾ ಕಾರ್ಯ ಪ್ರಾರಂಭಗೊಂಡಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಮುಂದಿನ ದಿನಗಳಲ್ಲಿ ಶ್ರೀಮಾತಾ ಪೆಸಿಶನ್ ಕಂಪೋನೆಂಟ್‌ನ ಸ್ವದೇಶಿ ಪ್ರಾಡಕ್ಟ್‌ಗಳನ್ನು ಅಮೇಜಾನ್ ಸೇರಿದಂತೆ ವಿವಿಧ ಆನ್‌ಲೈನ್ ಮಾರುಕಟ್ಟೆಗೂ ಪರಿಚಯಿಸುವ ಆಕಾಂಕ್ಷೆ ಹೊಂದಿದ್ದಾರೆ ಭಟ್.
ಶ್ರೀರಾಮ್ ಭಟ್ ಅವರ ಸಂಪರ್ಕ: 9845582997

ಫೇಸ್‌ಶೀಲ್ಡ್‌ನ ಉಪಯೋಗಗಳು:
¶ ಮರುಬಳಕೆ ಮಾಡಬಹುದಾಗಿದೆ.
¶ ಮಾಲಿನ್ಯ ತಡೆಗಟ್ಟಲು ಸಹಾಯಕ.
¶ ಹೆಚ್ಚು ಪಾರದರ್ಶಕ
¶ ಧೂಳಿನಿಂದ ಮುಕ್ತಿ
¶ ಮಾಸ್ಕ್‌ಗಳಿಗಿಂತ ಹೆಚ್ಚು ಸುರಕ್ಷಿತ.

No comments:

Post a Comment