Thursday, October 15, 2020

ವಿಕ್ರಮ್‌ಗೆ ಒಲಿದ ಸಂಗೀತ...

¶ ಎಂ.ಎಸ್.ಶೋಭಿತ್ ಮೂಡ್ಕಣಿ
ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ವಿಶಿಷ್ಟ ಪ್ರತಿಭೆ ಕೊಳ್ಯೂರಿನ ವಿಕ್ರಮ್ ಭಾರಧ್ವಾಜ್. 

ಮಂಗಳೂರು ಮಂಡಲದ ಕೊಳ್ಯೂರು ವಲಯದ ವೆಂಕಟೇಶ ಪ್ರಸಾದ್ ಮತ್ತು ಸ್ವಪ್ನಾ ಎಂ. ದಂಪತಿಯ ಪುತ್ರ ವಿಕ್ರಮ್ ಭಾರದ್ವಾಜ್ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನ ಮೆಟ್ಟಿಲೇರಿದ್ದಾನೆ.

ಹಲವಾರು ಟಿವಿ ಶೋಗಳು, ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕ್ರಮ್, ವಿ.ಶಿಲ್ಪಾ ಭಟ್ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಮತ್ತು ವಿ.ಎಂ.ಟಿ.ಗಿರಿ ಅವರ ಬಳಿ ಭಾವಗೀತೆ, ಚಿತ್ರಗೀತೆ ಅಭ್ಯಾಸ ನಡೆಸಿದ್ದಾನೆ.

¶ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳೇ ಸ್ಪೂರ್ತಿ:
ಸಂಗೀತ, ಯಕ್ಷಗಾನ, ನಾಟಕ, ಹರಿಕಥೆಗಳಲ್ಲಿ ಹೆಸರು ಮಾಡಿರುವ ವಿಕ್ರಮ್‌ಗೆ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ, ಕಲಿಕೋತ್ಸವಗಳೇ ಸಾಧನೆ ಮಾಡಲು ಸ್ಪೂರ್ತಿ. ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದ ಮಾರ್ಗದರ್ಶನವೇ ಈವರೆಗೆ ತಂದು ನಿಲ್ಲಿಸಿದೆ ಎನ್ನುತ್ತಾನೆ ವಿಕ್ರಮ್.

¶ ಸಹೋದರಿಯರಿಗೆ ಈತನೇ ಗುರು!:
ವಿಕ್ರಮ್‌ನ ಸಹೋದರಿಯರಾದ ಅನುಜ್ಞಾ, ಅನನ್ಯಾ ಮತ್ತು ಅನುಷಾ ಕೂಡಾ ಸಂಗೀತ ವಿಭಾಗದಲ್ಲಿ ಸಾಧನೆ ಮಾಡುತ್ತಿದ್ದು, ಈ ಮೂವರಿಗೆ ಅಣ್ಣನೇ ಗುರು! ಅಣ್ಣನ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ಅನುಷಾ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ' ದಲ್ಲಿ ಭಾಗವಹಿಸಿದ್ದಾಳೆ. ಜೊತೆಗೆ ಕರಾವಳಿ ಕಲೋತ್ಸವ ಸಂಗೀತ ಸ್ಪರ್ಧೆಯಲ್ಲಿ ರನ್ನರ್‌ಅಪ್ ಪಟ್ಟವನ್ನು ಅಲಂಕರಿಸಿದ್ದಾಳೆ. ಸಹೋದರಿಯರೂ ನನ್ನಂತೆಯೇ ಸಾಧನೆ ಮಾಡುತ್ತಿದ್ದು, ಖುಷಿ ನೀಡಿದೆ ಎನ್ನುತ್ತಾನೆ ವಿಕ್ರಮ್.

¶ ಸಾಧನೆಗೆ ಸಂದ ಹಲವಾರು ಪ್ರಶಸ್ತಿಗಳು:
ವಿಕ್ರಮ್‌ನ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ತನ್ನ ಬಹುಮುಖ ಪ್ರತಿಭೆ ವ್ಯಕ್ತಿತ್ವದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂದಿದ್ದಾನೆ. ಕೇರಳ ರಾಜ್ಯದ ಕಲೋತ್ಸವದ ಸಂಸ್ಕೃತ ಗಾನಾಲಾಪನೆ ಮತ್ತು ಕನ್ನಡ ಕಂಠಪಾಠದಲ್ಲಿ A ಗ್ರೇಡ್‌ನೊಂದಿಗೆ ಪ್ರಶಸ್ತಿ ಪಡೆದಿದ್ದಾನೆ. 'ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟದ ನೂರಾರು ಪ್ರಶಸ್ತಿಗಳು ವಿಕ್ರಮ್‌ನ ಮುಡಿಗೇರಿವೆ.

ಓದಿನಲ್ಲೂ ಜಾಣನಾಗಿರುವ ಈತ ಸದ್ಯ ಮಂಜೇಶ್ವರದ ಜಿ.ಎಚ್.ಎಸ್.ಎಸ್. ಪ್ರವಳಿಕೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಕಲಾ ಲೋಕದಲ್ಲಿ ಇನ್ನಷ್ಟು ಸಾಧನೆಗೈಯ್ಯುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾನೆ ವಿಕ್ರಮ್.

No comments:

Post a Comment