Sunday, December 6, 2020

ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿರುವ ಯುವ ಪ್ರತಿಭೆ ಭಾವನಾ


-ಎಂ.ಎಸ್.ಶೋಭಿತ್, ಮೂಡ್ಕಣಿ
ಬರವಣಿಗೆ ಒಂದು ಕಲೆ. ಅದು ಸುಲಭವಾಗಿ ಎಲ್ಲರಿಗೂ ಒದಗುವಂತದ್ದಲ್ಲ. ಇಂತಹ ಬರವಣಿಗೆಯಲ್ಲಿ ಭರವಸೆಯ ಹೆಜ್ಜೆ ಗುರುತು ಮೂಡಿಸುತ್ತಿರುವ ಯುವ ಬರಹಗಾರ್ತಿ ಭಾವನಾ ಡಿ.ವಿ. ಇಂದಿನ ನಮ್ಮ ಅಂಕುರ ಸಾಧಕಿ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತುಮರಿ ಸಮೀಪದ ದುಗ್ಗಿನಕೊಡ್ಲಿನ ವಸಂತ ದುಗ್ಗಿನಕೊಡ್ಲು ಮತ್ತು ತುಳಸಿ ದಂಪತಿಯ ಪುತ್ರಿ ಭಾವನಾ ಡಿ.ವಿ. ಯುವ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾಳೆ.

ಚಿಕ್ಕಂದಿನಿಂದಲೂ ಪತ್ರಿಕೆಗಳಲ್ಲಿ ತನ್ನ ಹೆಸರು ಬರಬೇಕೆಂಬ ಕನಸಿತ್ತು. ಆ ಕನಸೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿತು ಎನ್ನುತ್ತಾಳೆ ಭಾವನಾ.

6ನೇ ತರಗತಿಯಲ್ಲಿರುವಾಗ ರಾಜ್ಯ ಮಟ್ಟದ ಕಥೆ ಹೇಳುವ ಸ್ಪರ್ಧೆಗೆ ಆಯ್ಕೆಯಾಗಿದ್ದ ಇವಳು 10ನೇ ತರಗತಿಯಲ್ಲಿರುವಾಗ ಬರೆದ "ಶಾಶ್ವತವಾಗಿ ನಿನ್ನ ಕಂದಮ್ಮನಾಗಿರಲೇ ಅಮ್ಮ" ಎಂಬ ಕವನ ಮಲೆನಾಡು ಮಲ್ಲಿಗೆ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಅಲ್ಲದೇ ಇದೇ ಕವಿತೆಯಿಂದಾಗಿ ತಾಲೂಕಾ ಮಟ್ಟದ ಕವಿಗೋಷ್ಠಿ, ದ್ವಿತೀಯ ಪಿಯುಸಿಯಲ್ಲಿರುವಾಗ ಮೂಡಬಿದಿರೆಯಲ್ಲಿ ನಡೆದ 26ನೇ ವರ್ಷದ ಮಕ್ಕಳ ಧ್ವನಿ ಕವಿಗೋಷ್ಠಿ, ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶವೂ ಈಕೆಗೆ ಲಭಿಸಿತು.

ಅಮ್ಮನ ಕುರಿತು ಬರೆದ ಕವನ ಸಾಹಿತ್ಯರಂಗದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಯಿತು. ಅಮ್ಮನ ಕವನ ನನ್ನ ಕೈಹಿಡಿದಿದೆ ಎಂಬುದು ಭಾವನಾಳ ಅಭಿಮತ.

ಯುವ ಅಂಕಣಕಾರ್ತಿ:
ಕಳೆದ 9 ವಾರಗಳಿಂದ ಸಾಗರ ಸುತ್ತ ವಾರಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ ಸರಣಿ ಅಂಕಣಗಳನ್ನು ಬರೆಯುತ್ತಿದ್ದಾಳೆ. "ಔಷಧಿ ಸಸ್ಯಗಳ ಪರಿಚಯ" ಎಂಬ ಅಂಕಣದ ಮೂಲಕ ವಿವಿಧ ಗಿಡಮೂಲಿಕೆಗಳ ಕುರಿತು ಬರೆಯುವ ಮೂಲಕ ಜನರಲ್ಲಿ ಗಿಡಮೂಲಿಕೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾಳೆ.

ಓದಿನಲ್ಲಿಯೂ ಮುಂದೆ ಇರುವ ಭಾವನಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95.16% ಅಂಕ ದಾಖಲಿಸಿ ಸಾಧನೆಗೈದಿದ್ದಾಳೆ. 

ಸದ್ಯ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಕಾಂ. ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಈಕೆ ಮುಂದಿನ ದಿನಗಳಲ್ಲಿ ಓದಿನ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸುವ ಆಕಾಂಕ್ಷೆಯನ್ನು ಹೊಂದಿದ್ದಾಳೆ.

1 comment: