Monday, July 8, 2024

ಸೌಂದರ್ಯದ ಗಣಿ ‘ಗಡಾಯಿಕಲ್ಲು’


ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಪಂ ವ್ಯಾಪ್ತಿಯ ಮಂಜೊಟ್ಟಿ ಸಮೀಪದಲ್ಲಿರುವ ಇತಿಹಾಸ ಪ್ರಸಿದ್ಧ  ‘ಗಡಾಯಿಕಲ್ಲು’ ಚಾರಣಿಗರಿಗೆ ಹೇಳಿ ಮಾಡಿಸಿದಂತಹ ಜಾಗಗಳಲ್ಲೊಂದು. ಮೇಲಕ್ಕೆ ಸಾಗುವ ಪ್ರಯಾಣ ಆಯಾಸದಾಯಕವೆನಿಸಿದರೂ, ಪ್ರಕೃತಿಯ ಸೌಂದರ್ಯ ಚಾರಣಿಗರಿಗೆ ಆಯಾಸವನ್ನು ಮರೆಯುವಂತೆ ಮಾಡುವುದು ಈ ಚಾರಣದ ವಿಶೇಷ. 


-ಎಂ ಎಸ್ ಶೋಭಿತ್, ಮೂಡ್ಕಣಿ
ಚಿತ್ರಗಳು: ಚಂದನ್ ಕೋಣೆಮನೆ

ಶ್ಚಿಮ ಘಟ್ಟದ ಕುದುರೆಮುಖ ಪರ್ವತ ಶ್ರೇಣಿಯ ‘ಗಡಾಯಿಕಲ್ಲು’ ಚಾರಣ ಪ್ರಿಯರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪದಲ್ಲಿ ಇರುವ ಗಡಾಯಿಕಲ್ಲು, ಸಮುದ್ರ ಮಟ್ಟದಿಂದ ಸುಮಾರು ೧೭೮೮ ಮೀ ಎತ್ತರದಲ್ಲಿದೆ. 

ಕಾಲೇಜಿನ ಕ್ಯಾಂಪಸ್‌ನಿಂದ ಪ್ರತಿನಿತ್ಯ ಗಡಾಯಿಕಲ್ಲಿನ ದೃಶ್ಯವನ್ನು ಕಣ್ತುಂಬಿಕೊಂಡು ‘ಈ ವಾರನಾದ್ರೂ ಅಲ್ಲೊಂದು ಟ್ರಕ್ಕಿಂಗ್ ಮಾಡ್ಬೇಕು’ ಅಂತ ಹೇಳುತ್ತಿದ್ದ ನಾವು ಯೋಜನೆಯಂತೆ ಬೆಳಗಿನ ಚುಮುಚುಮು ಚಳಿಯಲ್ಲಿ ಉಜಿರೆಯಿಂದ ಹೊರಟು ಸೂರ್ಯ ಮೇಲೇರುವ ಮುನ್ನ ಗಡಾಯಿಕಲ್ಲಿನ ಕಡೆಗೆ ಪ್ರಯಾಣ ಬೆಳೆಸಿದೆವು. ಕೋಟೆಯ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಿ, ಅವರ ಅನುಮತಿಯೊಂದಿಗೆ ಉತ್ಸಾಹದಿಂದ ಚಾರಣ ಆರಂಭಿಸಿದೆವು.

ಐತಿಹಾಸಿಕ ಕೋಟೆ:
ಸರಿಸುಮಾರು 5-6 ಕಿಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ‘ಗಡಾಯಿಕಲ್ಲು’, ‘ನರಸಿಂಹಗಢ’, ‘ಜಮಲಾಬಾದ್ ಕೋಟೆ’ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಈ ಕೋಟೆಯ ಕುರಿತು ಇತಿಹಾಸವನ್ನು ಕೆದಕುತ್ತಾ ಹೋದಂತೆ ಅನೇಕ ಕುತೂಹಲಕಾರಿ ಅಂಶಗಳು ಸಿಗುತ್ತದೆ. 

ಈ ಕೋಟೆಯ ಮೂಲ ಹೆಸರು ‘ನರಸಿಂಹಗಢ’. ಹಿಂದೆ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದ ಜೈನ ದೊರೆ ನರಸಿಂಹ ಜೈನ ಈ ಕೋಟೆಯನ್ನು ಕಟ್ಟಿಸಿದ್ದನು. ಈ ಹಿನ್ನೆಲೆಯಲ್ಲಿ ಈ ಕೋಟೆ ಆತನ ಹೆಸರಿನಿಂದ ಪ್ರಸಿದ್ಧಿ ಪಡೆದಿತ್ತು. ಕಾಲಾನಂತರದಲ್ಲಿ ಮೈಸೂರು ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಟಿಪ್ಪು ಸುಲ್ತಾನ್ 1974 ರಲ್ಲಿ ಮಂಗಳೂರು ಯುದ್ಧದ ಬಳಿಕ ಶ್ರೀರಂಗಪಟ್ಟಣಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಈ ಕೋಟೆಯನ್ನು ವಶಪಡಿಸಿಕೊಂಡನು. ಬಳಿಕ ತನ್ನ ತಾಯಿ ಜಮಲಬೀಯ ನೆನಪಿಗೋಸ್ಕರ ‘ಜಮಲಾಬಾದ್ ಕೋಟೆ’ ಎಂದು ಮರುನಾಮಕರಣ ಮಾಡಿದನು.

ಬೆಟ್ಟದ ಬಂಡೆಗಳನ್ನೇ ಕೊರೆದು ಮೆಟ್ಟಿಲುಗಳನ್ನು ಮಾಡಿದ್ದು, ಟಿಪ್ಪುವಿನ ಮಾರ್ಗದರ್ಶನದಲ್ಲಿ ಫ್ರೆಂಚ್ ಇಂಜಿನಿಯರ್‌ಗಳು ಇದನ್ನು ನಿರ್ಮಿಸಿರಬಹುದು ಎಂದು ಹೇಳಲಾಗುತ್ತದೆ. 1799 ರ ನಾಲ್ಕನೇ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರು ಈ ಕೋಟೆಯನ್ನು ವಶಪಡಿಸಿಕೊಂಡರು ಎನ್ನುತ್ತದೆ ಇತಿಹಾಸ. ಈ ಕೋಟೆಯ ಒಳಗಡೆ ಎರಡು ನೀರಿನ ಕೆರೆಗಳಿದ್ದು, ಬಿರು ಬೇಸಿಗೆಯ ಸಮಯದಲ್ಲೂ ಇಲ್ಲಿ ನೀರು ಬತ್ತದೇ ಇರುವುದು ವಿಶೇಷ. ಅಲ್ಲಲ್ಲಿ ಇರುವ ಗೋಡೆಯ ಅನೇಕ ಅವಶೇಷಗಳು, ಫಿರಂಗಿಗಳು ಕೋಟೆಯ ಹಳೆಯ ಇತಿಹಾಸವನ್ನು ಹೇಳುತ್ತದೆ.

ಹೀಗೆ ಬನ್ನಿ:
ಚಾರಣಕ್ಕೆ ಬರುವ ಮೊದಲು ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ವೆಬ್‌ಸೈಟ್ https://kudremukhanationalpark.in/ ಮೂಲಕ ಚಾರಣಕ್ಕೆ ನೋಂದಾಯಿಸಿಕೊಳ್ಳಬೇಕು. ಬಳಿಕ ಚಾರಣ ಪ್ರಾರಂಭಿಸುವ ಮುನ್ನ ಇಲಾಖೆಯ ಸಿಬ್ಬಂದಿಯ ಬಳಿ ಪ್ರತಿಯೊಬ್ಬರಿಗೆ ತಲಾ 50 ರೂ. ಶುಲ್ಕ ಪಾವತಿಸಿ ಅನುಮತಿ ಪಡೆದು ಚಾರಣ ಆರಂಭಿಸಬೇಕು. ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು 65 ಕಿಮೀ. ದೂರದಲ್ಲಿದೆ. ಧರ್ಮಸ್ಥಳದಿಂದ ಸುಮಾರು 17 ಕಿಮೀ ದೂರ ಇದೆ. ಬೆಳ್ತಂಗಡಿಯಿಂದ ಲ್ಯಾಲ ತಲುಪಿ ಅಲ್ಲಿಂದ 1.5 ಕಿಮೀ ಸಾಗಿದರೆ ಗಡಾಯಿಕಲ್ಲಿಗೆ ತಲುಪಬಹುದು. 

ನವೆಂಬರ್ ತಿಂಗಳಿನಿಂದ ಮೇ ತಿಂಗಳಿನ ಕೊನೆಯ ತನಕವೂ ಚಾರಣಿಗರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯ ತನಕ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಚಾರಣಕ್ಕೆ ಬರುವವರು ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಬರುವುದು ಒಳಿತು. 

ಭಾರತೀಯ ಪುರಾತತ್ವ ಇಲಾಖೆ ಈ ಕೋಟೆಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಿದ್ದು, ಈ ಕೋಟೆಯ ಮೇಲಿನಿಂದ ಪಶ್ಚಿಮ ಘಟ್ಟದ ಕುದುರೆಮುಖ ಪರ್ವತಗಳ ಶ್ರೇಣಿ, ಕರಾವಳಿ ಪ್ರದೇಶದ ಭೂದೃಶ್ಯಗಳು ಹೃನ್ಮನವನ್ನು ಸೆಳೆಯುತ್ತದೆ. ಕೋಟೆಯ ಒಳಗೆ ಅಲ್ಲಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ಕೋಟೆಯ ಮೇಲ್ಭಾಗದಲ್ಲಿ ಒಂದಿಷ್ಟು ಹರಟೆಯನ್ನು ಹೊಡೆದು ಚಾರಣವನ್ನು ಆಸ್ವಾದಿಸುತ್ತಾ ಬಿಸಿಲೇರುವ ಮೊದಲೇ ಗಡಾಯಿಕಲ್ಲಿನ ಚಾರಣಕ್ಕೆ ಪೂರ್ಣವಿರಾಮ ಇಟ್ಟೆವು. ನಿಮಗೂ ಚಾರಣದಲ್ಲಿ ಕುತೂಹಲ ಮತ್ತು ಆಸಕ್ತಿ ಇದ್ದಲ್ಲಿ ಮತ್ಯಾಕೆ ತಡ! ಬನ್ನಿ, ನೀವೂ ಗಡಾಯಿಕಲ್ಲಿನ ಚಾರಣವನ್ನು ಅನುಭವಿಸಿ!! 


ಮರ್ಲ್‌ ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ!



(ಉಜಿರೆಯಲ್ಲಿದ್ದಾಗ, 2022 ರ ಡಿಸೆಂಬರ್‌ನಲ್ಲಿ ಬರೆದ ಬರಹ)

 


No comments:

Post a Comment