Sunday, November 17, 2024

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೊಂದು ಮಾರ್ಗದರ್ಶಿ!

 


~ ಎಂ ಎಸ್ ಶೋಭಿತ್, ಮೂಡ್ಕಣಿ

ಎಷ್ಟೋ ಜನ ಯುವಕ ಯುವತಿಯರು ಮುಂದೊಂದು ದಿನ ನಾನು ಜಿಲ್ಲಾಧಿಕಾರಿಯಾಗಬೇಕು, ಐಪಿಎಸ್ ಅಧಿಕಾರಿಯಾಗಬೇಕು; ಆ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಆದರೆ ಬಹುತೇಕ ನಾಗರಿಕ ಸೇವಾ ಆಕಾಂಕ್ಷಿಗಳು ಪರೀಕ್ಷೆಯನ್ನು ಎದುರಿಸಲು ಸೂಕ್ತ ಮಾರ್ಗದರ್ಶನದ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಇದರಿಂದಾಗಿಯೇ ಕೆಲವು ಆಕಾಂಕ್ಷಿಗಳು ಗುರಿ ತಲುಪುವ ಮೊದಲೇ 'Give up' ಎಂದುಬಿಡುತ್ತಾರೆ. ಅಂತಹ ಆಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವಂತಹ ದಾರಿದೀಪ ತೋರಿಸುವ ಕೃತಿ 'ಬಿಎಸ್ಸಿ ಫೇಲ್ ಐಪಿಎಸ್ ಪಾಸ್!'

ಮೂರು ದಶಕಗಳಿಗೂ ಹೆಚ್ಚು ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಮಹಾನಿರ್ದೇಶಕರಾಗಿ ನಿವೃತ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಅವರು ತಮ್ಮ ಅನುಭವಗಳ ಹೂರಣದಿಂದ ಈ ಕೃತಿಯನ್ನು ರಚಿಸಿದ್ದಾರೆ.

ತಮ್ಮ ಬಾಲ್ಯ, ವಿದ್ಯಾಭ್ಯಾಸ, ವೃತ್ತಿ ಜೀವನದ ಆರಂಭದ ಕತೆಯನ್ನು ಹೇಳುತ್ತಲೇ ಆಕಾಂಕ್ಷಿಗಳು ಹೇಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು, ಸೋಲಲು ಕಾರಣವೇನು, ಆಕಾಂಕ್ಷಿಗಳು ಯಾವ ಗುಣವನ್ನು ಹೊಂದಿರಬೇಕು, ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡರೆ ಉಪಯೋಗ ಮತ್ತು ಸವಾಲುಗಳೇನು ಹೀಗೆ ಹಲವು ವಿಚಾರಗಳನ್ನು 23 ವಿವಿಧ ಅಧ್ಯಾಯಗಳಲ್ಲಿ ಲೇಖಕರು ವಿವರಿಸಿದ್ದಾರೆ.

6 ವರ್ಷಗಳ ಕಾಲ ಯುಪಿಎಸ್‌ಸಿ ಸಂದರ್ಶನ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿರುವ ಇವರು, ಸಂದರ್ಶನದ ಸಮಯದಲ್ಲಿ ಸಂದರ್ಶಕರು ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಾರೆ, ಅಭ್ಯರ್ಥಿಗಳು ಹೇಗೆ ಉತ್ತರಿಸಬೇಕು, ಇದಕ್ಕೆ ಹೇಗೆ ತಯಾರಿ ನಡೆಸಿರಬೇಕು ಎಂಬುದನ್ನು ಪ್ರತ್ಯೇಕವಾದ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಕೃತಿಯ ಕೊನೆಯಲ್ಲಿ ಆಯ್ದ ಯುಪಿಎಸ್‌ಸಿ ಸಾಧಕರ ಚಿಕ್ಕ ಚಿಕ್ಕ ಯಶೋಗಾಥೆಗಳೂ ಇವೆ.

ಕೃತಿಯ ಪ್ರತಿ ಅಧ್ಯಾಯದಲ್ಲೂ ಲೇಖಕರು ಬಳಸಿರುವ Quote, ಅನುಭವ ಕಥನಗಳು ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಎಥಿಕ್ಸ್ ಪತ್ರಿಕೆ ಮತ್ತು ಪ್ರಬಂಧ ಬರವಣಿಗೆಗೂ ಸಹಕಾರಿಯಾಗಲಿದೆ ಎಂದರೆ ತಪ್ಪಲ್ಲ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಆವೃತ್ತಿಯಲ್ಲಿ ಲಭ್ಯವಿರುವ, ಸ್ಪರ್ಧಾತ್ಮಕ ಪರೀಕ್ಷೆಗೆ ಈಗಾಗಲೇ ಸಿದ್ಧತೆ ಪ್ರಾರಂಭಿಸಿರುವ ಮತ್ತು ಪ್ರಾರಂಭಿಸಲಿರುವ ಎಲ್ಲರೂ ಓದಲೇಬೇಕಾದ ಕೃತಿಯಿದು!

ಬಿ.ಎಸ್ಸಿ. ಫೇಲ್, ಐಪಿಎಸ್ ಪಾಸ್!

ಲೇ: ಡಾ. ಡಿ.ವಿ. ಗುರುಪ್ರಸಾದ್

ಪ್ರ: ಸಪ್ನ ಬುಕ್ ಹೌಸ್, ಬೆಂಗಳೂರು

ಪುಟ: 182

ಬೆಲೆ: 150 ರೂ.


No comments:

Post a Comment